ನಾಗಮಂಗಲ ಗಲಭೆಕೋರರ ಮೇಲೆ ಕ್ರಮ ಕೈಗೊಳ್ಳಿ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.14:- ನಾಗಮಂಗಲದಲ್ಲಿ ನಡೆದಿರುವ ಗಲಭೆ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರು, ಎಷ್ಟೇ ಪ್ರಭಾವಿ ಆಗಿದ್ದರು ಅವರ ಮೇಲೆ ಕ್ರಮ ಆಗಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.
ನಗರದ ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು ಅತ್ಯಂತ ಹಿರಿಯರಿದ್ದು, ಅನುಭವಿಗಳಿದ್ದಾರೆ. ಯಾವ ಕಾರಣಕ್ಕಾಗಿ ಇದನ್ನು ಸಣ್ಣ ಪ್ರಕರಣ ಎಂದಿದ್ದಾರೆ ನನಗೆ ಗೊತ್ತಾಗುತ್ತಿಲ್ಲ. ಆದರೆ, ರಾಜ್ಯ ಸರ್ಕಾರ ಮತಗಳ ಓಲೈಕೆ ರಾಜಕಾರಣ ಬಿಡಬೇಕಿದ್ದು, ಎಲ್ಲಕ್ಕಿಂತ ದೇಶ ಮುಖ್ಯ. ಗಣೇಶ ಮೂರ್ತಿ ನಮ್ಮ ಭಾವನೆಗಳ ಸಂಕೇತವಾಗಿದ್ದು, ಮೆರವಣಿಗೆಗೆ ಅಡ್ಡಿಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ಸರ್ಕಾರ ಎಚ್ಚರವಹಿಸಬೇಕಿದೆ ಎಂದು ಹೇಳಿದರು.
ಪ್ರಧಾನಿ ಮೋದಿಮುಖ್ಯ ನ್ಯಾಯಾಧೀಶರ ಮನೆಗೆ ಗಣಪತಿ ಪೂಜೆಗೆ ಹೋದ ವಿಚಾರದ ಕುರಿತಂತೆ ಮಾತನಾಡಿದ ಅವರು, ಅದರಲ್ಲಿ ತಪ್ಪೇನಿದೆ? ಇಬ್ಬರು ದೇಶದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳಾಗಿದ್ದು, ಇಬ್ಬರು ಸೇರಿ ಗಣಪತಿ ಪೂಜೆ ಮಾಡಿದರೆ ಅದರಲ್ಲಿ ತಪ್ಪನ್ನೇಕೆ ಹುಡುಕುತ್ತೀರಾ? ಹೀಗೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ. ಅವರಿಬ್ಬರು ರಾಷ್ಟ್ರದ ಉನ್ನತಿಗಾಗಿ ದುಡಿಯುತ್ತಿದ್ದಾರೆ. ಒಟ್ಟಾಗಿ ಸೇರಿ ಪೂಜೆ ಮಾಡಿದ್ದಾರೆ. ಇದನ್ನೇ ದೊಡ್ಡ ವಿಚಾರ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದರು.
ಸಚಿವರಿಗೆ ಆತ್ಮೀಯ ಸ್ವಾಗತ
ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಸಚಿವ ವಿ. ಸೋಮಣ್ಣ ಅವರಿಗೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಆತ್ಮೀಯ ಸ್ವಾಗತ ಕೋರಿದರು. ನಗರದ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸಿದ ಸಚಿವ ವಿ. ಸೋಮಣ್ಣ ಅವರಿಗೆ ಸ್ಥಳೀಯ ನಾಯಕರು ಅಭಿನಂದನೆ ಸಲ್ಲಿಸಿ ಬರಮಾಡಿಕೊಂಡರು. ಈ ವೇಳೆ ಶಾಸಕ ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಇತರರಿದ್ದರು.
ಚಾಮುಂಡಿಬೆಟ್ಟಕ್ಕೆ ಭೇಟಿ
ವಿವಿಧ ಕಾರ್ಯಕ್ರಮಗಳ ನಿಮಿತ್ತ ನಗರಕ್ಕಾಗಮಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ತಮ್ಮ ಪತ್ನಿಯೊಂದಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಬಗ್ಗೆ ಮಾತನಾಡಿದ ಅವರು, ಚಾಮುಂಡಿತಾಯಿಯ ಆಶೀರ್ವಾದದಿಂದ ನನಗೆ ದೊಡ್ಡ ಸ್ಥಾನ ಸಿಕ್ಕಿದೆ. ಜನರೊಂದಿಗೆ ಸದಾ ಇದ್ದರೆ ಜನರ ಪ್ರೀತಿಯೂ ಹಾಗೇ ಇರುತ್ತದೆ ಎಂಬುದಕ್ಕೆ ಮೈಸೂರಿನಲ್ಲಿ ನನಗೆ ನೀಡಿದ ಸ್ವಾಗತವೇ ಸಾಕ್ಷಿ ಆಗಿದ್ದು, ಜನರ ಪ್ರೀತಿ ನೋಡಿ ಹೃದಯ ತುಂಬಿ ಬಂದಿದೆ ಎಂದರು.