ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿಶ್ವನಾಥ್ ಜಮಾದಾರ್ ಗುಂಡಿಕ್ಕಿ ಹತ್ಯೆ
ಕಲಬುರಗಿ:ಸೆ.13: ರೌಡಿಶೀಟರ್‍ನೊಬ್ಬನಿಗೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾದ ಘಟನೆ ಜಿಲ್ಲೆಯ ಆಳಂದ್ ತಾಲ್ಲೂಕಿನ ವಾಗ್ದರಿ ರಸ್ತೆಯ ಖಾನಾಪುರದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ಮೃತನಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿಶ್ವನಾಥ್ ಕಲ್ಯಾಣಿ ಜಮಾದಾರ್ (50) ಎಂದು ಗುರುತಿಸಲಾಗಿದೆ.
ಪಡಸಾವಳಿಯಿಂದ ಆಳಂದ್ ಪಟ್ಟಣಕ್ಕೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ವಿಶ್ವನಾಥ್ ಜಮಾದಾರ್ ಅವರಿಗೆ ದ್ವಿಚಕ್ರವಾಹನದಲ್ಲಿ ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು ಮೂರು ಬಾರಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಆಳಂದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಗೆ ಒಳಗಾದ ವಿಶ್ವನಾಥ್ ಕಲ್ಯಾಣಿ ಜಮಾದಾರ್ ವಿರುದ್ಧ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದು, ರೌಡಿಶೀಟರ್ ಪಟ್ಟಿಯಲ್ಲಿದ್ದ ಎಂದು ತಿಳಿದುಬಂದಿದೆ.