ಆಕ್ಷೇಪಾರ್ಹ ಹೇಳಿಕೆ: ರಾಹುಲ್‌ಗೆ ಸಮನ್ಸ್
ಪುಣೆ.ಅ.೫- ಹಿಂದೂ ನಾಯಕ ವೀರ್ ಸಾವರ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಸಂಬಂಧ ಪುಣೆಯ ವಿಶೇಷ ನ್ಯಾಯಾಲಯ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದೆ.
ವೀರ್ ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಕಳೆದ ವರ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅ.೨೩ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ರಾಹುಲ್ ಗಾಂಧಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಈ ಪ್ರಕರಣವನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ (ಎಫ್‌ಎಂಎಫ್‌ಸಿ) ನ್ಯಾಯಾಲಯದಿಂದ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.
ಜಂಟಿ ಸಿವಿಲ್ ನ್ಯಾಯಾಧೀಶ ಮತ್ತು ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ಅಮೋಲ್ ಶಿಂಧೆ ನೇತೃತ್ವದ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯವು ಈ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೫೦೦ (ಮಾನಹಾನಿ) ಅಡಿಯಲ್ಲಿ ಶಿಕ್ಷಾರ್ಹ ಆರೋಪಕ್ಕೆ ಉತ್ತರಿಸಲು ರಾಹುಲ್ ಗಾಂಧಿ ಅವರ ಹಾಜರಾತಿ ಅಗತ್ಯ ಎಂದು ಸಮನ್ಸ್ ಹೊರಡಿಸಿದೆ ಎಂದು ಸತ್ಯಕಿ ಸಾವರ್ಕರ್ ಅವರನ್ನು ಪ್ರತಿನಿಧಿಸುವ ವಕೀಲ ಸಂಗ್ರಾಮ್ ಕೊಲ್ಹಟ್ಕರ್ ತಿಳಿಸಿದ್ದಾರೆ.