ಗಗನಕ್ಕೇರಿದ ಟೊಮೆಟೊ ಧಾರಣೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಅ.೫:ಶ್ರೀಸಾಮಾನ್ಯನಿಗೆ ಒಂದಲ್ಲಾ ಒಂದು ರೀತಿಯಲ್ಲಿ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಈರಳ್ಳಿ-ಬೆಳ್ಳುಳ್ಳಿ ಬಳಿಕ ಟೊಮೆಟೊ ದರ ಗಗನಕ್ಕೇರಿದೆ. ಒಂದು ವಾರದ ಹಿಂದೆ ಪ್ರತಿ ಕೆಜಿ ಟೊಮೆಟೊ ದರ ೪೦ ರೂ. ಇತ್ತು. ಇದೀಗ ಈ ದರ ೮೦ ರೂ.ಗೆ ಏರಿಕೆಯಾಗಿದೆ. ಅಂದರೆ ಪ್ರತಿ ಕೆಜಿ ಟೊಮೆಟೊ ದರ ಎರಡು ಪಟ್ಟು ಹೆಚ್ಚಳವಾಗಿದೆ.ನವರಾತ್ರಿ ಹಬ್ಬದ ಸಂದರ್ಭದಲ್ಲೇ ಟೊಮೆಟೊ ದರ ದುಬಾರಿಯಾಗಿರುವುದು ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಂತಾಗಿದೆ. ಅಕಾಲಿಕ ಮಳೆಯಿಂದಾಗಿ ಟೊಮೆಟೊ ಇಳುವರಿ ಕುಸಿತ ಕಂಡಿದೆ. ಹೀಗಾಗಿ ಬೇಡಿಕೆ ಹೆಚ್ಚಳವಾಗಿದೆ.ಪೂರೈಕೆ ಕಡಿಮೆ ಇರುವ ಕಾರಣ ಟೊಮೆಟೊ ಬೆಲೆ ಹಠಾತ್ ಹೆಚ್ಚಳವಾಗಿದೆ. ಮುಂಬರುವ ದಿನಗಳಲ್ಲಿ ಟೊಮೆಟೊ ದರ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.
ಅಕಾಲಿಕ ಮಳೆಯಿಂದಾಗಿ ಒಂದು ಕೆಜಿ ಈರುಳ್ಳಿ ದರ ೭೦ ರೂ. ಗಡಿ ದಾಟಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸಿದೆ. ಅದೇ ರೀತಿ ಪ್ರತಿ ಕೆಜಿ ಬೆಳ್ಳುಳ್ಳಿ ದರ ೫೦೦ ರೂ.ಗೆ ಏರಿಕೆಯಾಗಿದೆ. ಇದರ ಬೆನ್ನಲ್ಲೆ ಟೊಮೆಟೊ ದರವು ದುಬಾರಿಯಾಗಿದ್ದು, ಸಾಲು ಸಾಲು ಹಬ್ಬಗಳ ಸಂದರ್ಭದಲ್ಲಿ ಗ್ರಾಹಕ ಇನ್ನಷ್ಟು ಬೆಲೆ ತೆರಬೇಕಾಗುತ್ತದೆ.