ಕೇಜ್ರಿಗೆ ಜಾಮೀನು: ಆಪ್ ಸಂಭ್ರಮಾಚರಣೆ
ನವದೆಹಲಿ,ಸೆ.೧೩- ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಾಮೀನು ಪಡೆದ ನಂತರ ಆಮ್ ಆದ್ಮಿ ಪಾರ್ಟಿ (ಎಎಪಿ) ಸಂಭ್ರಮಾಚರಣೆ ಆರಂಭಿಸಿದೆ.
ಆರು ತಿಂಗಳ ಬಳಿಕ ತಿಹಾರ್ ಜೈಲಿನಿಂದ ಬಿಡುಗಡೆಯಾಗಲಿರುವ ಸಿಎಂ ಅವರನ್ನು ಸ್ವಾಗತಿಸಲು ನಾಯಕರು ಸಿದ್ಧತೆ ಆರಂಭಿಸಿದ್ದಾರೆ. ಪಕ್ಷದ ಅಧಿಕಾರಿಗಳ ಪ್ರಕಾರ, ಶುಕ್ರವಾರ ಸಂಜೆಯೊಳಗೆ ಅವರು ಬಿಡುಗಡೆಯಾಗುವ ಸಾಧ್ಯತೆಯಿದೆ. ಕೇಜ್ರಿವಾಲ್ ಜಾಮೀನಿನ ಸುದ್ದಿ ಹೊರಬೀಳುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿ, ಘೋಷಣೆಗಳನ್ನು ಕೂಗುತ್ತಾ ಪರಸ್ಪರ ಅಭಿನಂದಿಸುತ್ತಿದ್ದಾರೆ..
ಕೇಜ್ರಿವಾಲ್ ಅನುಪಸ್ಥಿತಿಯಲ್ಲಿ ಹರಿಯಾಣದಲ್ಲಿ ಪ್ರಚಾರದ ನೇತೃತ್ವ ವಹಿಸಿರುವ ಕೇಜ್ರಿವಾಲ್ ಅವರ ಪತ್ನಿ, ಎಎಪಿ ಕುಟುಂಬಕ್ಕೆ ಅಭಿನಂದನೆಗಳು. ನಮ್ಮ ಇತರ ನಾಯಕರು ಶೀಘ್ರದಲ್ಲೇ ಬಿಡುಗಡೆಯಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಹಿರಿಯ ಎಎಪಿ ನಾಯಕ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಇಂದು ಮತ್ತೊಮ್ಮೆ ಸತ್ಯವು ಸುಳ್ಳು ಮತ್ತು ಪಿತೂರಿಗಳ ವಿರುದ್ಧದ ಹೋರಾಟದಲ್ಲಿ ಗೆದ್ದಿದೆ. ೭೫ ವರ್ಷಗಳ ಹಿಂದೆ ಯಾವುದೇ ಭವಿಷ್ಯದ ಸರ್ವಾಧಿಕಾರಿ ವಿರುದ್ಧ ಸಾಮಾನ್ಯ ಜನರನ್ನು ಬಲಪಡಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆ ಮತ್ತು ದೃಷ್ಟಿಗೆ ನಾನು ಮತ್ತೊಮ್ಮೆ ಗೌರವ ಸಲ್ಲಿಸುತ್ತೇನೆ ಎಂದಿದ್ದಾರೆ.