ನಾಗಮಂಗಲ ಗಲಭೆ: ಸತ್ಯ ಶೋಧನಾ ಸಮಿತಿ ರಚನೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಸೆ.೧೩:ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ೨ ದಿನಗಳ ಹಿಂದೆ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಘಟನೆಯ ಸತ್ಯಾಸತ್ಯತೆ ತಿಳಿಯಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಸತ್ಯಶೋಧನಾ ತಂಡವನ್ನು ರಚಿಸಿದ್ದಾರೆ.
ನಾಗಮಂಗಲದಲ್ಲಿ ಕಳೆದ ೧೧ ರಂದು ಗಣೇಶ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಕೆಲ ಮುಸ್ಲಿಂ ಕಿಡಿಗೇಡಿ ಯುವಕರು ನಡೆಸಿದ ದುಷ್ಕೃತ್ಯದ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್ ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಐವರ ಸತ್ಯಶೋಧನಾ ಸಮಿತಿಯನ್ನು ವಿಜಯೇಂದ್ರ ಅವರು ರಚಿಸಿದ್ದು, ಘಟನಾ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಿ ಒಂದು ವಾರದೊಳಗೆ ಸಮಗ್ರ ವರದಿ ನೀಡುವಂತೆ ಸೂಚಿಸಿದ್ದಾರೆ.
ಶಾಸಕರಾದ ಭೈರತಿ ಬಸವರಾಜು, ಮಾಜಿ ಸಚಿವ ಕೆ.ಸಿ ನಾರಾಯಣಗೌಡ, ಬಿಜೆಪಿ ರಾಜ್ಯ ಕಾರ್ಯದರ್ಶಿ ಲಕ್ಷ್ಮಿ ಅಶ್ವಿನ್‌ಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ಈ ಸತ್ಯಶೋಧನಾ ಸಮಿತಿಯಲ್ಲಿದ್ದಾರೆ.