ಮಹಾದಲ್ಲಿ ಅನಿಲ ಸೋರಿಕೆ ನಾಗರಿಕರ ಆತಂಕ
ಮುಂಬೈ ,ಸೆ.೧೩-ಮಹಾರಾಷ್ಟ್ರದ ಅಂಬರನಾಥದಲ್ಲಿ ಅನಿಲ ಸೋರಿಕೆ ಉಂಟಾಗಿ ನಾಗರಿಕರಲ್ಲಿ ಆತಂಕ ಮೂಡಿಸಿದೆ. ಇಡೀ ನಗರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ರಾತ್ರಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೊರಿವಲಿ ಇಂಡಸ್ಟ್ರಿಯಲ್ ಎಸ್ಟೇಟ್ (ಎಂಐಡಿಸಿ) ಯಲ್ಲಿನ ರಾಸಾಯನಿಕ ಘಟಕದಿಂದ ಅನಿಲ ಸೋರಿಕೆ ಸಂಭವಿಸಿದೆ. ಇದರಿಂದ ನಗರದೆಲ್ಲೆಡೆ ರಾಸಾಯನಿಕ ಹೊಗೆ ವ್ಯಾಪಿಸಿದೆ.
ವರದಿ ಪ್ರಕಾರ ಈ ಅನಿಲ ಸೋರಿಕೆ ರಾಸಾಯನಿಕ ಕಂಪನಿಯ ಕಾರ್ಖಾನೆಯಿಂದ ಉಂಟಾಗಿದೆ ಎನ್ನಲಾಗಿದೆ.ನಗರದಾದ್ಯಂತ ರಾಸಾಯನಿಕ ಹೊಗೆ ಹರಡಿದೆ. ಹೊಗೆಯಿಂದಾಗಿ ಜನರ ದೃಷ್ಟಿ ಕುಂಠಿತವಾಗಿದೆ ಕಣ್ಣುಗಳಲ್ಲಿ ತುರಿಕೆ, ಗಂಟಲು ನೋವು ಕಾಣಿಸಿಕೊಳ್ಳುತ್ತಿದೆ.
ಮಸುಕಾಗಿರುವ ರಸ್ತೆಗಳು
ಅಂಬರನಾಥ್ ನಗರದ ಹಲವು ಫೋಟೋಗಳು ಮತ್ತು ವಿಡಿಯೋಗಳು ಹೊರಬರುತ್ತಿವೆ. ಇಡೀ ನಗರದ ಜನರು ತೀವ್ರ ಭಯಭೀತರಾಗಿದ್ದಾರೆ. ಕೆಮಿಕಲ್ ಹೊಗೆಯಿಂದ ರಸ್ತೆಗಳೂ ಸರಿಯಾಗಿ ಕಾಣದಿರುವುದು ವಿಡಿಯೋಗಳಲ್ಲಿ ಕಂಡು ಬರುತ್ತಿದೆ. ಜನರು ಮೂಗು ಬಾಯಿ ಕಟ್ಟಿಕೊಂಡು ಮನೆಯಿಂದ ಹೊರಬರುತ್ತಿದ್ದಾರೆ. ಕಣ್ಣಿಗೆ ಕಾಣುವಷ್ಟು ದೂರದವರೆಗೆ ಹೊಗೆ ಗೋಚರಿಸುತ್ತಿದೆ.
ಇನ್ನು ರೈಲ್ವೆ ಹಳಿ ಕಾಣುತ್ತಿಲ್ಲ
ರಾಸಾಯನಿಕ ಅನಿಲ ಸೋರಿಕೆಯ ಪರಿಣಾಮ ರೈಲು ನಿಲ್ದಾಣವನ್ನು ತಲುಪಿದೆ. ಹೊಗೆಯಿಂದಾಗಿ ರೈಲ್ವೆ ಹಳಿಗಳು ಅಗೋಚರವಾಗಿವೆ. ಈ ಅನಿಲ ಸೋರಿಕೆಯ ಯಾವುದೇ ಭೀಕರ ಪರಿಣಾಮಗಳು ಕಂಡು ಬಂದಿಲ್ಲ, ಒಂದು ವೇಳೆ ತೀವ್ರ ಪರಿಣಾಮ ಕಂಡುಬಂದರೆ ಜನರು ನಗರವನ್ನು ತೊರೆಯಬೇಕಾಗುತ್ತದೆ.
ಸಂಬಂಧಪಟ್ಟ ಕಂಪನಿಯು ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಹೊಗೆಯನ್ನು ಬಿಡುಗಡೆ ಮಾಡಿದೆಯೇ ಎಂಬುದು ವಾಯು ಮಾಲಿನ್ಯ ನಿಯಂತ್ರಣ ಮಂಡಳಿಗೆ ಇನ್ನೂ ಸ್ಪಷ್ಟವಾಗಿಲ್ಲ.ಸದ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಮೊಬೈಲ್ ವ್ಯಾನ್ ಮೂಲಕ ವಾಯು ಮಾಲಿನ್ಯದ ಮೇಲೆ ನಿಗಾ ಇಡಲಾಗಿದೆ. ರಾಸಾಯನಿಕ ಕಾರ್ಖಾನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಆದರೆ, ಕಾರ್ಖಾನೆಯಲ್ಲಿ ಅನಿಲ ಎಲ್ಲಿಂದ ಸೋರಿಕೆಯಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಅನೇಕ ತಂಡಗಳು ಅದರ ಪರಿಣಾಮವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ. ಜನರು ತಮ್ಮ ಮನೆಗಳಲ್ಲಿಯೇ ಇರುವಂತೆ ಮನವಿ ಮಾಡಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದ್ದು, ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.