ಮಲೈಕಾ ಅರೋರಾ ತಂದೆ ಆತ್ಮಹತ್ಯೆ
ಮುಂಬೈ,ಸೆ.೧೧-ನಟಿ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ೯ ಗಂಟೆಗೆ ಈ ಘಟನೆ ನಡೆದಿದೆ. ಬಾಂದ್ರಾದ ಆಶಾ ಮೈನಾರ್ ಕಟ್ಟಡದ ಏಳನೇ ಮಹಡಿಯಿಂದ ಹಾರಿ ಅನಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಕೆಲ ದಿನಗಳಿಂದ ಅನಿಲ್ ಅರೋರಾ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ. ಮಲೈಕಾ ಮಾಜಿ ಪತಿ ಅರ್ಬಾಜ್ ಖಾನ್ ಕುಟುಂಬ ಸಮೇತ ಸ್ಥಳಕ್ಕೆ ಆಗಮಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅವರ ದೇಹವನ್ನು ಬಾಬಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮಲೈಕಾ ತನ್ನ ತಂದೆಯ ನಿಧನದ ಸುದ್ದಿ ತಿಳಿದಾಗ, ಅವರು ಪುಣೆಯಲ್ಲಿದ್ದರು. ಮಾಹಿತಿ ಸಿಕ್ಕ ತಕ್ಷಣ ಆಕೆ ಮುಂಬೈಗೆ ಹೊರಟಿದ್ದಾರೆ.
ಕಳೆದ ವರ್ಷ ಅನಿಲ್ ಅರೋರಾ ಅನಾರೋಗ್ಯದ ಕಾರಣ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಮಲೈಕಾ ಆಸ್ಪತ್ರೆಯಲ್ಲಿ ತಾಯಿ ಜಾಯ್ಸ್ ಜೊತೆ ಕಾಣಿಸಿಕೊಂಡಿದ್ದಾರೆ ಆದರೆ, ಚಿಕಿತ್ಸೆಗೆ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ.
ಅನಿಲ್ ಅರೋರಾ ಪಂಜಾಬಿ ಹಿಂದೂ ಕುಟುಂಬಕ್ಕೆ ಸೇರಿದವರು. ಅವರು ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ.ಈ ಘಟನೆಯಿಂದ ಇಡೀ ಅರೋರಾ ಕುಟುಂಬ ಆಘಾತಕ್ಕೊಳಗಾಗಿದೆ ಎನ್ನಲಾಗಿದೆ.
ಬಾಂದ್ರಾ ಪೊಲೀಸರು ಮತ್ತು ಅಪರಾಧ ವಿಭಾಗದ ತಂಡ ಘಟನಾ ಸ್ಥಳಕ್ಕೆ ಧಾವಿಸಿದೆ.