ಮಣಿಪುರ: ಮತ್ತೆ ಭುಗಿಲೆದ್ದ ಹಿಂಸಾಚಾರ
ಗುವಾಹಟಿ,ಸೆ.೧೦- ಮಣಿಪುರದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ. ಇಂಫಾಲದಲ್ಲಿ ನಿವೃತ್ತ ಕಾನ್‌ಸ್ಟೆಬಲ್ ಮತ್ತು ಮಹಿಳೆಯೊಬ್ಬರನ್ನು ಕೊಂದ ನಂತರ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ.
ಪ್ರತಿಭಟನೆಗಳು ಹಿಂಸೆಯ ರೂಪ ಪಡೆದಿವೆ.ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಉನ್ನತ ಅಧಿಕಾರಿಗಳು ರಾಜೀನಾಮೆ ನೀಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದು, ಇದರಲ್ಲಿ ಅನೇಕರು ಗಾಯಗೊಂಡಿದ್ದಾರೆ.
ಮಣಿಪುರ ಸರ್ಕಾರವು ಸೋಮವಾರ ಮತ್ತು ಮಂಗಳವಾರ ಶಾಲಾ-ಕಾಲೇಜುಗಳನ್ನು ಮುಚ್ಚಲು ಆದೇಶಿಸಿದೆ. ಆದರೆ, ವಿದ್ಯಾರ್ಥಿಗಳು ಬಂದ್ ಉಲ್ಲಂಘಿಸಿ ಮಣಿಪುರ ಜಿಂದಾಬಾದ್’ ಹಾಗೂ ಎಲ್ಲ ಅಸಮರ್ಥ ಶಾಸಕರು ರಾಜೀನಾಮೆ ನೀಡಬೇಕು ಎಂಬ ಘೋಷಣೆಗಳನ್ನು ಕೂಗುತ್ತಾ ರಾಜಭವನಕ್ಕೆ ಮೆರವಣಿಗೆ ನಡೆಸಿದ್ದಾರೆ. ಅವರು ಶಾಂತಿಗಾಗಿಯೂ ಒತ್ತಾಯಿಸಿದರು. ಮಣಿಪುರವನ್ನು ಉಳಿಸಿ ಏಕೆಂದರೆ ನಾವು ಭಾರತೀಯರು, ಇಲ್ಲದಿದ್ದರೆ ಮಣಿಪುರವನ್ನು ಬಿಟ್ಟುಬಿಡಿ ಎಂಬ ಬ್ಯಾನರ್‌ಗಳನ್ನು ಹಿಡಿದ ಪ್ರತಿಭಟನಾಕಾರರು, ಡಿಜಿಪಿ ಮತ್ತು ರಾಜ್ಯ ಭದ್ರತಾ ಸಲಹೆಗಾರರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಸೆಪ್ಟೆಂಬರ್ ೧ ರಿಂದ ನಡೆದ ಹಿಂಸಾಚಾರದಲ್ಲಿ ೧೧ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಿಂಸಾಚಾರದ ನಂತರ, ಸೋಮವಾರ ಇಂಫಾಲ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಭಾನುವಾರ ರಾತ್ರಿ ನಿವೃತ್ತ ಕಾನ್‌ಸ್ಟೆಬಲ್ ಮತ್ತು ಮಹಿಳೆಯೊಬ್ಬರು ಹತ್ಯೆಯಾದಾಗ ಆಕ್ರೋಶ ಭುಗಿಲೆದ್ದಿದೆ.ಇದರ ನಂತರವೇ ರಾಜ್ಯದಲ್ಲಿ ಅಶಾಂತಿ ಹೆಚ್ಚಾಯಿತು ಮತ್ತು ದೊಡ್ಡ ಪ್ರಮಾಣದ ಪ್ರತಿಭಟನೆಗಳು ಪ್ರಾರಂಭವಾದವು. ಮಣಿಪುರದ ರಾಜಭವನವು ಪ್ರತಿಭಟನೆಯ ಕೇಂದ್ರಬಿಂದುವಾಗಿದೆ, ಅಲ್ಲಿ ವಿದ್ಯಾರ್ಥಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮತ್ತು ಉನ್ನತ ಅಧಿಕಾರಿಗಳ ರಾಜೀನಾಮೆಗೆ ಒತ್ತಾಯಿಸಿದ್ದಾರೆ.