ಮುಡಾ ಪ್ರಕರಣ: ಸೆ.12ರ ತನಕ ಸಿಎಂಗೆ ತಾತ್ಕಾಲಿಕ ರಿಲಿಫ್
ಬೆಂಗಳೂರು, ಸೆ. 9: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಸೆ.12ಕ್ಕೆ ಮುಂದೂಡಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಯವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಮುಂದೆ ಮುಂದುವರೆಯಿತು.
ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಖಾಸಗಿ ವ್ಯಕ್ತಿಯಿಂದ ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆಯ ಸೆಕ್ಷನ್ 17ಎ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರಿ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದು ವಾದಿಸಿದರು.
ಈ ಕಾಯಿದೆಯನ್ವಯ ಪ್ರಾಥಮಿಕ ತನಿಖೆ ನಡೆಸಬೇಕು ಎಂಬುದಾಗಿ ತಿಳಿಸಲಾಗಿದೆ. ಯಾವುದೇ ತನಿಖೆ ನಡೆದಿಲ್ಲ. ಪ್ರಕರಣದಲ್ಲಿ ಸಾಕಷ್ಟು ವಿಳಂಬವಾಗಿದೆ. 1998ರಲ್ಲಿ ಡಿನೋಟಿಫಿಕೇಷನ್ ಮಾಡಲಾಗಿದೆ. ಬಳಿಕ ನೇರವಾಗಿ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂಬ ವಿಷಯವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ ಸೆಕ್ಷನ್ 17ಎ ರ ಅಡಿ ಮತ್ತು ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮಗಳ (ಎಸ್‌ಒಪಿ) ಪ್ರಕಾರ ತನಿಖಾಧಿಕಾರಿಗಳಿಂದ ರಾಜ್ಯಪಾಲರು ಮಾಹಿತಿ ಸಂಗ್ರಹಿಸಬೇಕಾಗಿತ್ತು. ರಾಜ್ಯಪಾಲರು ಆ ಅರ್ಜಿಯನ್ನು ಪರಿಗಣಿಸಬಾರದಿತ್ತು. ಅರ್ಜಿಯನ್ನು ದೂರುದಾರರಿಗೆ ಹಿಂದಿರುಗಿಸಬೇಕಾಗಿತ್ತು ಎಂದು ಪೀಠಕ್ಕೆ ಶೆಟ್ಟಿ ಹೇಳಿದರು.
ಈ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು
ಪ್ರಾಥಮಿಕ ತನಿಖೆಗೆ ನಡೆಯಬೇಕು ಎಂಬುದಾದರೆ ಮೊದಲು ಎಫ್‌ಐಆರ್ ದಾಖಲಿಸುವುದಕ್ಕೆ ಸರ್ಕಾರ ಮುಂದಾಗುವುದೇ?’ ಎಂದು ಪ್ರಶ್ನಿಸಿದದರು.
ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿದರು.