ಕಾರುಗಳ ಮುಖಾಮುಖಿ ಡಿಕ್ಕಿ: ಐವರ ದುರ್ಮರಣ
ತುಮಕೂರು/ಮಧುಗಿರಿ, ಸೆ. 8- ಎರಡು ಕಾರುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸೇರಿ ಐದು ಮೃತಪಟ್ಟು, ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಧುಗಿರಿ ತಾಲ್ಲೂಕಿನ ಕೆರೆಗಳಪಾಳ್ಯ ಮತ್ತು ಕಾಟಗಾನಹಳ್ಳಿ ಬಳಿ ನಡೆದಿದೆ.
ಮೃತಪಟ್ಟಿರುವವರನ್ನು ಪಾವಗಡ ತಾಲ್ಲೂಕಿನ ಎತ್ತಗಾನಹಳ್ಳಿ ಗ್ರಾಮದ ಜನಾರ್ಧನರೆಡ್ಡಿ , ಇವರ ಪುತ್ರಿ ಸಿಂಧೂ, ಪುತ್ರ ಟ್ರಯಾಕ್ ದೇವಾ, ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿಯ ಕಾರೇಹಳ್ಳಿ ಗ್ರಾಮದ ನಿವಾಸಿಗಳಾದ ಸಿದ್ದಗಂಗಪ್ಪ ಹಾಗೂ ನಾಗರಾಜು ಎಂದು ಗುರುತಿಸಲಾಗಿದೆ.
ಪಾವಗಡ ತಾಲ್ಲೂಕಿನ ಎತ್ತನಹಳ್ಳಿ ನಿವಾಸಿ ಗೀತಾ , ಈಕೆಯ ಪುತ್ರ ಯೋಧ, ಕಾರು ಚಾಲಕ ಆನಂದ್ ಹಾಗೂ ಒಂದು ವರ್ಷದ ಗಂಡು ಮಗು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಿ ದಾಖಲಿಸಲಾಗಿದೆ.
ಪಾವಗಡ ತಾಲ್ಲೂಕಿನ ಎತ್ತನಹಳ್ಳಿಯಿಂದ ಗಣೇಶ ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ಹೋಗುತ್ತಿದ್ದ ಕಾರು ಮತ್ತು ಬೆಂಗಳೂರಿನಿಂದ ಮಧುಗಿರಿ ತಾಲ್ಲೂಕು ಕಾರೇನಹಳ್ಳಿ ಗ್ರಾಮಕ್ಕೆ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಬಾಲಕ ಟ್ರಯಾಕ್ ದೇವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಕಾರುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ರಭಸಕ್ಕೆ ಸಂಪೂರ್ಣ ಜಖಂಗೊಂಡಿವೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಸಿಪಿಐ ಹನುಮಂತರಾಯ, ಪಿಎಸ್ಐ ವಿಜಯಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರುಗಳಲ್ಲಿ ಸಿಲುಕಿದ್ದ ಶವಗಳನ್ನು ಹೊರ ತೆಗೆದು ಮಧುಗಿರಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಶ್ರಮಿಸಿದ್ದಾರೆ.
ಈ ಸಂಬಂಧ ಮಧುಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಹಾಗೂ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.