ಕೋಲ್ಕತ್ತಾ ಘಟನೆ ಖಂಡಿಸಿ ೨೫ ದೇಶಗಳಲ್ಲಿ ಪ್ರತಿಭಟನೆ
ಕೊಲ್ಕತ್ತಾ, ಸೆ.೯-ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಬರ್ಬರ ಹತ್ಯೆಯನ್ನು ವಿರೋಧಿಸಿ ಭಾರತೀಯ ಸಮುದಾಯದ ಸಾವಿರಾರು ಜನರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ೨೫ ದೇಶಗಳ ೧೩೦ ಕ್ಕೂ ಹೆಚ್ಚು ನಗರಗಳಲ್ಲಿ ನಡೆಸಲಾಗಿದೆ. ಕಳೆದ ತಿಂಗಳು ಆಸ್ಪತ್ರೆಯಲ್ಲಿ ಪ್ರಶಿಕ್ಷಣಾರ್ಥಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಅವರು ಒತ್ತಾಯಿಸಿದ್ದಾರೆ. ಜಪಾನ್, ಆಸ್ಟ್ರೇಲಿಯಾ, ತೈವಾನ್ ಮತ್ತು ಸಿಂಗಾಪುರದಲ್ಲಿ ಪ್ರಾರಂಭವಾದ ಪ್ರತಿಭಟನೆಗಳು ಯುರೋಪಿಯನ್ ರಾಷ್ಟ್ರಗಳ ಅನೇಕ ನಗರಗಳನ್ನು ತಲುಪಿವೆ. ಅಮೆರಿಕದ ೬೦ಕ್ಕೂ ಹೆಚ್ಚು ಸ್ಥಳಗಳಲ್ಲಿ ಭಾರತೀಯ ಸಮುದಾಯದ ಜನರು ಪ್ರದರ್ಶನ ನಡೆಸಿದ್ದಾರೆ.
ಸ್ವೀಡಿಷ್ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಮಹಿಳೆಯರು, ಮುಖ್ಯವಾಗಿ ಕಪ್ಪು ಬಟ್ಟೆಯನ್ನು ಧರಿಸಿ, ಬಂಗಾಳಿ ಭಾಷೆಯಲ್ಲಿ ಹಾಡುಗಳನ್ನು ಹಾಡಿದ್ದಾರೆ. ಅವರು ಭಾರತೀಯ ಮಹಿಳೆಯರ ಅಪರಾಧ ಮತ್ತು ಸುರಕ್ಷತೆಗೆ ಹೊಣೆಗಾರಿಕೆಯನ್ನು ಕೋರುವ ಫಲಕಗಳನ್ನು ಪ್ರದರ್ಶಿಸಿದ್ದಾರೆ. ನಂತರ ಎಲ್ಲಾ ಪ್ರತಿಭಟನಾಕಾರರು ಟಾರ್ಗ್ ಸ್ಕ್ವೇರ್‌ನಲ್ಲಿ ಒಟ್ಟುಗೂಡಿ ದ್ದಾರೆ.
ಕರ್ತವ್ಯ ನಿರತ ಯುವ ಟ್ರೈನಿ ವೈದ್ಯೆಯ ಮೇಲೆ ನಡೆದ ಈ ಘೋರ ಅಪರಾಧದ ಸುದ್ದಿ ನಮ್ಮೆಲ್ಲರನ್ನು ಬೆಚ್ಚಿ ಬೀಳಿಸಿದೆ ಎಂದು ಗ್ಲೋಬಲ್ ಪ್ರತಿಭಟನಾ ಸಂಘಟಕಿ ದೀಪ್ತಿ ಜೈನ್ ಹೇಳಿದ್ದಾರೆ. ಈ ಹೃದಯಹೀನತೆ, ಕ್ರೌರ್ಯ ಮತ್ತು ಮಾನವ ಜೀವನದ ಕಡೆಗಣನೆಯಿಂದ ನಾವೆಲ್ಲರೂ ಆಘಾತಕ್ಕೊಳಗಾಗಿದ್ದೇವೆ. ಬ್ರಿಟಿಷ್ ಪ್ರಜೆ ಮತ್ತು ಕಲ್ಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಹಳೆಯ ವಿದ್ಯಾರ್ಥಿನಿ ದೀಪ್ತಿ ಅವರು ಕಳೆದ ತಿಂಗಳು ಬ್ರಿಟನ್‌ನಲ್ಲಿ ಮಹಿಳಾ ವೈದ್ಯರಿಂದ ಪ್ರತಿಭಟನೆಯನ್ನು ಆಯೋಜಿಸಿದ್ದಾರೆ.