ಗೋಪಾಲ್ ದಾಸ್ ಆರೋಗ್ಯ ಸ್ಥಿತಿ ಗಂಭೀರ
ಲಕ್ನೋ, ಸೆ.೯-ಅಯೋಧ್ಯೆಯ ರಾಮಮಂದಿರ ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಆರೋಗ್ಯ ಹದಗೆಟ್ಟಿದೆ. ಅವರನ್ನು ಲಕ್ನೋದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ.೮೬ ವರ್ಷದ ಮಹಂತ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಅವರಿಗೆ ಮೂತ್ರ ವಿಸರ್ಜನೆ ಹಾಗೂ ಆಹಾರ ಸೇವನೆ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಜನ್ಮಾಷ್ಟಮಿಯನ್ನು ಆಚರಿಸಲು ಅವರು ಆಗಸ್ಟ್ ೨೪ ರಂದು ಅಯೋಧ್ಯೆಯಿಂದ ಮಥುರಾಗೆ ತೆರಳಿದರು. ಅಲ್ಲಿಂದ ಇಂದೋರ್‌ಗೂ ತೆರಳಿದ್ದಾರೆ
ಹಿಂದಿರುಗುವಾಗ ಅವರು ಅನಾರೋಗ್ಯಕ್ಕೆ ಒಳಗಾದಾಗ, ಅವರನ್ನು ಗ್ವಾಲಿಯರ್‌ಗೆ ಸೇರಿಸಲಾಗಿದೆ. ಆದರೆ, ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರದ ಕಾರಣ ಅವರನ್ನು ಲಖನೌದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ.ಸಧ್ಯ ತಜ್ಞ ವೈದ್ಯರ ತಂಡ ತೀವ್ರ ನಿಗಾ ವಹಿಸಿ ಅವರಿಗೆ ಚಿಕಿತ್ಸೆ ನೀಡುತ್ತಿದೆ.
ಮಹಂತ್ ನೃತ್ಯ ಗೋಪಾಲದಾಸ್ ಅವರು ಈ ಹಿಂದೆಯೂ ಅಸ್ವಸ್ಥರಾಗಿದ್ದಾಗ ಮೇದಾಂತದಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ಮೇದಾಂತ ಆಸ್ಪತ್ರೆ ವೈದ್ಯಕೀಯ ಬುಲೆಟಿನ್‌ನಲ್ಲಿ ತಿಳಿಸಿದೆ. ಅವರ ಉತ್ತಮ ಆರೋಗ್ಯಕ್ಕಾಗಿ, ಅಯೋಧ್ಯೆಯಲ್ಲಿರುವ ಅವರ ಆಶ್ರಮ ಮಣಿರಾಮ್ ದಾಸ್ ಚಾವ್ನಿಯಲ್ಲಿನ ಕೊಠಡಿಯನ್ನು ಐಸಿಯು ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಲಾಗಿದೆ.
ನೃತ್ಯ ಗೋಪಾಲದಾಸ್ ಅವರನ್ನು ೨೦೨೦ ರಲ್ಲಿ ರಾಮಮಂದಿರ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರನ್ನು ೨೦೦೩ ರಲ್ಲಿ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ಮಾಡಲಾಯಿತು. ರಾಮಮಂದಿರ ಆಂದೋಲನದ ಮಹಾನ್ ನಾಯಕ ಮಹಂತ್ ರಾಮಚಂದ್ರ ದಾಸ್ ಪರಮಹಂಸರ ಮರಣದ ನಂತರ ಅವರಿಗೆ ಈ ಹುದ್ದೆಯನ್ನು ನೀಡಲಾಯಿತು. ಇದರ ನಂತರ, ೨೦೨೦ ರಲ್ಲಿ ಅವರನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ಮಾಡಲಾಯಿತು. ಅಧ್ಯಕ್ಷರಾದ ನಂತರ ಅವರ ಭದ್ರತೆಯನ್ನು ವೈ ನಿಂದ ಝಡ್ ವರ್ಗಕ್ಕೆ ಹೆಚ್ಚಿಸಲಾಗಿದೆ.