ರಸ್ತೆ ವಿಚಾರಕ್ಕೆ ಜಗಳ ಬಾಲಕ ಸಾವಿಗೆ ಶರಣು
ಚಿಕ್ಕಬಳ್ಳಾಪುರ, ಸೆ.೯- ಅಕ್ಕ-ಪಕ್ಕದ ಮನೆಯವರು ವಿವಾದಿತ ರಸ್ತೆ ಜಾಗದ ವಿಚಾರವಾಗಿ ಜಗಳ ನಡೆದು ಮನನೊಂದು ಬಾಲಕನೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕವರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಬಾಲಕ ಮಂಜುನಾಥ್ ಪುಷ್ಪ ದಂಪತಿಗಳ ೧೬ ವರ್ಷದ ಪುತ್ರ ಎಂದು ಗುರುತಿಸಲಾಗಿದೆ.ಶನಿವಾರ ಸಂಜೆ ಗ್ರಾಮದ ರಾಮಯ್ಯ ಹಾಗೂ ಲಕ್ಷ್ಮಮ್ಮ ದಂಪತಿ, ಹಾಗೂ ಲಕ್ಷಯ್ಯ ಹಾಗೂ ಆಶಮ್ಮ ದಂಪತಿ ಎಂಬುವವರು ಪುತ್ರ ಸುದೀಪ್ ಹಾಗೂ ಆತನ ತಂಗಿಯ ಮೇಲೆ ವಿವಾದಿತ ರಸ್ತೆಯಲ್ಲಿ ಓಡಾಡಿದ ಕಾರಣ ಜಗಳ ಮಾಡಿ ಹಲ್ಲೆ ನಡೆಸಿದ್ದರು.
ಈ ವೇಳೆ ಕೋಪಗೊಂಡ ಮಗ ಇಟ್ಟಿಗೆ ತೆಗೆದುಕೊಂಡು ಎಸೆದಿದ್ದು ರಾಮಯ್ಯ ಎಂಬುವವರು ಗಾಯಗೊಂಡಿದ್ದರು. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ನನ್ನ ಹಾಗೂ ಮಗನ ವಿರುದ್ಧ ದೂರು ನೀಡಿದ್ದಾರೆ.ದೂರು ನೀಡಿ ಸುಮ್ನನಾಗದೆ ನಿಮ್ಮನ್ನು ಜೈಲಿಗೆ ಹಾಕಿಸದೆ ಬಿಡುವುದಿಲ್ಲ ಎಂದು ಎರಡು ಕುಟುಂಬದವರು ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ನನ್ನ ಮಗ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಎಂದು ಮೃತ ಬಾಲಕನ ತಂದೆ ಮಂಜುನಾಥ್ ತಿಳಿಸಿದ್ದಾರೆ.ಘಟನೆ ನಂತರ ಆಶಮ್ಮ ಹಾಗೂ ಲಕ್ಷ್ಮಮ್ಮನವರ ಕುಟುಂಬಸ್ಥರು ಮನೆಗೆ ಬೀಗಗಳನ್ನು ಜಡಿದು ಪರಾರಿಯಾಗಿದ್ದಾರೆ.
ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುಟುಂಬಗಳು ಕಳೆದ ೨ ವರ್ಷಗಳಿಂದ ರಸ್ತೆ ವಿಚಾರವಾಗಿ ಮೃತನ ಪೋಷಕರೊಂದಿಗೆ ಜಗಳವಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.