ಸೆ.೧೨ ರ ಬಳಿಕ ತೀರ್ಪು ಸಾಧ್ಯತೆ
ಬೆಂಗಳೂರು, ಸೆ. ೯- ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ಇಂದು ಮುಂದುವರೆಯಲಿದ್ದು, ಸೆ. ೧೨ ರ ನಂತರ ನ್ಯಾಯಾಲಯದ ಈ ಬಗ್ಗೆ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
ಕಳೆದ ಆ. ೧೭ ರಂದು ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್ ಅವರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಹೈಕೋರ್ಟ್‌ನಲ್ಲಿ ಆ. ೧೯ ರಂದು ರಿಟ್ ಅರ್ಜಿ ಸಲ್ಲಿಸಿದ್ದರು.
ಅಂದಿನಿಂದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದ್ದು, ಇಂದು ಸಹ ವಿಚಾರಣೆ ಮುಂದುವರೆಯಲಿದೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ವಕೀಲ ಮನು ಸಿಂಘ್ವಿ ವಾದ ಮಂಡಿಸಿದ್ದು, ರಾಜ್ಯಪಾಲರ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಮಣಿಂದರ್ ಸಿಂಗ್, ಪ್ರದೀಪ್ ಪರ ಮಾಜಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಅಬ್ರಾಹಂ ಪರ ವಕೀಲರಾದ ರಂಗನಾಥರೆಡ್ಡಿ ವಾದ ಮಂಡಿಸಿದ್ದರು.
ನ್ಯಾಯಾಲಯದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ಈ ಅರ್ಜಿಯ ವಿಚಾರಣೆ ನಡೆದಿದೆ. ಇಂದು ನ್ಯಾ. ನಾಗಪ್ರಸನ್ನರವರ ಏಕಸದಸ್ಯ ಪೀಠದಲ್ಲಿ ನಡೆಯಲಿರುವ ಮುಂದುವರೆದ ಅರ್ಜಿ ವಿಚಾರಣೆಯಲ್ಲಿ ರಾಜ್ಯದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಮುಖ್ಯಮಂತ್ರಿ ಪರ ವಾದ ಮಂಡಿಸುವರು.
ಇದಾದ ಬಳಿಕ ಸೆ. ೧೨ ರಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಅಭಿಷೇಕ ಮನು ಸಿಂಘವಿ ಅವರು ಮುಖ್ಯಮಂತ್ರಿ ಪರ ತಮ್ಮ ವಾದವನ್ನು ಮುಂದುವರೆಸಲಿದ್ದಾರೆ.
ಹೀಗಾಗಿ ಸೆ. ೧೨ ರಂದು ನಂತರವೇ ನ್ಯಾಯಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ರಿಟ್ ಅರ್ಜಿಯ ತೀರ್ಪನ್ನು ಪ್ರಕಟಿಸುವ ಸಾಧ್ಯತೆ ಇದೆ.
ಈ ಪ್ರಕರಣದ ಸಂಬಂಧ ವಾದ-ಪ್ರತಿವಾದಗಳು ನ್ಯಾಯಾಲಯದಲ್ಲಿ ನಡೆದಿದ್ದು, ಸೆ. ೧೨ ರಂದು ವಾದ-ಪ್ರತಿವಾದಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಸೆ. ೧೨ ರಂದು ಈ ಪ್ರಕರಣದ ವಾದ ಪೂರ್ಣಗೊಂಡರೆ ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸಲಿದೆ.
ಸೆ. ೧೨ ರ ವರೆಗೂ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ ಪ್ರಕರಣದ ತೀರ್ಪಿನ ಬಗ್ಗೆ ಎಲ್ಲರೂ ಕಾಯಲೇಬೇಕಿದೆ.
ಇಡೀ ರಾಜ್ಯವೇ ಈ ಪ್ರಕರಣದ ತೀರ್ಪು ಏನಾಗಲಿದೆ ಎಂಬುದನ್ನು ಕುತೂಹಲದಿಂದ ಎದುರು ನೋಡುತ್ತಿದೆ.
ನ್ಯಾಯಾಲಯದಲ್ಲಿ ವಿಚಾರಣೆ ಇದ್ದಾಗಲೆಲ್ಲಾ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗದೆ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ಕಾಯ್ದಿರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಹ ಯಾವುದೇ ಕಾರ್ಯಕ್ರಮಗಳನ್ನು ನಿಗದಿ ಮಾಡದೇ ಇಡೀ ದಿನವನ್ನು ಕಾಯ್ದಿರಿಸಿದ್ದಾರೆ.
ಕಳೆದ ಸೆ. ೨ ರಂದು ಸಹ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಇದ್ದಾಗ ಮುಖ್ಯಮಂತ್ರಿಗಳು ಯಾವುದೇ ಕಾರ್ಯಕ್ರಮವನ್ನು ನಿಗದಿ ಮಾಡದೆ ಕಾಯ್ದಿರಿಸಿದ್ದರು.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ನ್ಯಾ. ನಾಗಪ್ರಸನ್ನ ಅವರ ಪೀಠದ ಮುಂದೆ ಮಧ್ಯಾಹ್ನ ೨.೩೦ಕ್ಕೆ ಆರಂಭವಾಗಿದೆ.