ಗುಂಪು ಘರ್ಷಣೆ, ಹಲವರಿಗೆ ಗಾಯ
(ಸಂಜೆವಾಣಿ ಪ್ರತಿನಿಧಿಯಿಂದ)
ಶಿವಮೊಗ್ಗ,ಸೆ.೮:ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಗಣೇಶ ಹಬ್ಬದ ಸಂದರ್ಭದಲ್ಲಿ ಎರಡೂ ಗುಂಪುಗಳ ನಡುವೆ ಘರ್ಷಣೆ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಕಲ್ಲು ತೂರಾಟ ಹಾಗೂ ದೊಣ್ಣೆಗಳಿಂದ ಹೊಡೆದಾಡಿಕೊಂಡಿರುವ ಘಟನೆ ನಡೆದಿದ್ದು, ಈ ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಕಾನ್ಸಟೇಬಲ್ ಸೇರಿ ಹಲವರು ಗಾಯಗೊಂಡಿದ್ದಾರೆ.
ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಬಿಳಚಿ ಕ್ಯಾಂಪ್ ಗ್ರಾಮದಲ್ಲಿ ನಿನ್ನೆ ಸಂಜೆ ಗಣೇಶ ಹಬ್ಬದ ವೇಳೆ ಡೊಳ್ಳು ಬಾರಿಸುವ ವಿಚಾರ ಎರಡೂ ಗುಂಪುಗಳ ನಡುವೆ ಗಲಾಟೆಗೆ ಕಾರಣವಾಗಿ ಎರಡೂ ಗುಂಪಿನವರು ಪರಸ್ಪರ ಕಲ್ಲು ತೂರಾಟ ನಡೆಸಿ ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ.
ಈ ಘಟನೆಯಲ್ಲಿ ಗಾಯಗೊಂಡಿರುವ ಕಾನ್ಸ್‌ಟೇಬಲ್ ಸೇರಿದಂತೆ ಹಲವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎರಡೂ ಗಣಪತಿ ಸಂಘಗಳು ನಿನ್ನೆ ಗಣೇಶ ಹಬ್ಬಕ್ಕೆ ಒಂದೇ ಡೊಳ್ಳಿನ ತಂಡದವರಿಗೆ ಹೇಳಿದ್ದರು. ಆದರೆ, ಎರಡೂ ಸಂಘಗಳ ಮೆರವಣಿಗೆ ಒಂದೇ ವೇಳೆ ಇದ್ದಿದ್ದರಿಂದ ಡೊಳ್ಳಿನ ತಂಡಕ್ಕೆ ಇನ್ನೊಂದು ಗಣಪತಿ ಸಂಘದ ಮೆರವಣಿಗೆಗೆ ಹೋಗಲು ತಡವಾಗಿದೆ ಆಗ ಇನ್ನೊಂದು ಗಣಪತಿ ಸಂಘದವರು ಮೊದಲು ಗಣಪತಿ ಸಂಘದ ಬಳಿ ಆಗಮಿಸಿ ವಿಚಾರಿಸಿದಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡೂ ಸಂಘದವರು ಕಲ್ಲು ತೂರಾಟ ನಡೆಸಿ ಬಡಿದಾಡಿಕೊಂಡಿದ್ದಾರೆ.
ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸರಿಗೂ ಗಾಯಗಳಾಗಿವೆ ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುನ್ನೆಚ್ಚೆರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಭಧ್ರಾವತಿ ಡಿವೈಎಸ್ಪಿ ಹಾಗೂ ಹೊಳೆಹೊನ್ನೂರು ಪೊಲೀಸ್ ಇನ್ಸ್‌ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪರಿಸ್ಥಿತಿ ಸದ್ಯ ಹತೋಟಿಯಲ್ಲಿದೆ ಎಂದು ಹೇಳಲಾಗಿದೆ.