ಜೈಲಿನಿಂದಲೇ ಇಮ್ರಾನ್ ಶಕ್ತಿ ಪ್ರದರ್ಶನ
ಇಸ್ಲಾಮಾಬಾದ್,ಸೆ.೮- ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷವು ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಇಂದು ಅಂದರೆ ಭಾನುವಾರದಂದು ದೊಡ್ಡ ಮಟ್ಟದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ನಡಿಗೆಗೆ ಅಲ್ಲಿನ ಸರ್ಕಾರ ಬೆದರಿದೆ. ಇದರಿಂದಾಗಿ ಇಡೀ ಇಸ್ಲಾಮಾಬಾದ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸರು ನಗರದ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಿದ್ದಾರೆ. ಏಕಾಏಕಿ ರ್‍ಯಾಲಿ ಸ್ಥಳವನ್ನೂ ಬದಲಾಯಿಸಲಾಗಿದೆ.
ಕಾರ್ಯಕರ್ತರೊಂದಿಗೆ ಬರುವಂತೆ ಮುಖಂಡರಿಗೆ ಸೂಚನೆ
ಕನಿಷ್ಠ ೫೦೦ ಕಾರ್ಯಕರ್ತರನ್ನಾದರೂ ಕರೆತರುವಂತೆ ಇಮ್ರಾನ್ ಖಾನ್ ಅವರ ಪಕ್ಷವು ವಿಧಾನಸಭಾ ಸದಸ್ಯರು ಮತ್ತು ಸಂಸದರಿಗೆ ಸೂಚಿಸಿದೆ. ಇದೇ ವೇಳೆ ದೂರದ ಊರುಗಳಿಂದ ಬರುವ ಮುಖಂಡರು ತಮ್ಮೊಂದಿಗೆ ೧೫೦ ಕಾರ್ಯಕರ್ತರನ್ನು ಕರೆತರುವಂತೆ ತಿಳಿಸಲಾಗಿದೆ. ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಈ ರ಼್ಯಾಲಿಯು ಇಂದು ಅಂದರೆ ಸೆಪ್ಟೆಂಬರ್ ೮ ರಂದು ಇಸ್ಲಾಮಾಬಾದ್‌ನ ಸಾಂಗ್ಜಾನಿಯಲ್ಲಿ ನಡೆಯಲಿದೆ .
ಪಕ್ಷವು ತನ್ನ ನಾಯಕರನ್ನು ನೇರವಾಗಿ ಇಸ್ಲಾಮಾಬಾದ್ ತಲುಪದಂತೆ ಕೇಳಿಕೊಂಡಿದೆ. ವರದಿ ಪ್ರಕಾರ, ರಾವಲ್ಪಿಂಡಿ, ಮುರ್ರೆ, ಹಜಾರಾ, ಅಟಾಕ್, ಚಕ್ವಾಲ್ ಮತ್ತು ಝೀಲಂನಿಂದ ನಾಯಕರು ಈವೆಂಟ್‌ಗೆ ಹೆಚ್ಚುವರಿ ಕಾರ್ಯಕರ್ತರನ್ನು ಕರೆತರುವ ನಿರೀಕ್ಷೆಯಿದೆ.
ವರದಿಯ ಪ್ರಕಾರ, ಪಿಟಿಐ ಅಧ್ಯಕ್ಷ ಬ್ಯಾರಿಸ್ಟರ್ ಗೌಹರ್, ಒಮರ್ ಅಯೂಬ್ ಮತ್ತು ಜಲ್ಸಾ ಸಮಿತಿ ಜನರು ಮಧ್ಯಾಹ್ನ ೨ ಗಂಟೆಯೊಳಗೆ ಸಭೆ ನಡೆಯುವ ಸ್ಥಳಕ್ಕೆ ತಲುಪುವಂತೆ ಸೂಚಿಸಿದ್ದಾರೆ. ಇದಕ್ಕೂ ಮುನ್ನ ಇಸ್ಲಾಮಾಬಾದ್ ಜಿಲ್ಲಾಡಳಿತವು ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಪ್ರತಿಭಟನಾ ಸ್ಥಳವನ್ನು ಬದಲಾಯಿಸಿದೆ. ಜಿಲ್ಲಾಧಿಕಾರಿ ಇರ್ಫಾನ್ ನವಾಜ್ ಶುಕ್ರವಾರ ಹೊಸ ಆದೇಶ ಹೊರಡಿಸಿದ್ದಾರೆ. ಇದರ ಅಡಿಯಲ್ಲಿ, ಕಾರ್ಯಕ್ರಮವನ್ನು ನಗರದ ಸಂಜಾನಿ ಪ್ರದೇಶದ ಮೂಲ ಸ್ಥಳದ ಮುಂಭಾಗದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.