ಮುಡಾ ಮತ್ತೊಂದು ಹಗರಣ ಬೆಳಕಿಗೆ
ಒಂದೇ ದಿನ ನೂರಾರು ನಿವೇಶನ ಖಾತೆ, ಮಾಜಿ ಅಧ್ಯಕ್ಷನಿಂದ ಅಕ್ರಮ-ಆರೋಪ
(ಸಂಜೆವಾಣಿ ಪ್ರತಿನಿಧಿಯಿಂದ)
ಮೈಸೂರು,ಸೆ.೮:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮತ್ತೊಂದು ಹಗರಣ ಬಯಲಾಗಿದ್ದು, ಮುಡಾದ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್ ಆಯುಕ್ತರ ಅನುಮತಿ ಇಲ್ಲದೆ ನೂರಾರು ನಿವೇಶನಗಳಿಗೆ ಒಂದೇ ದಿನ ಖಾತೆ ಮಾಡಿಸಿಕೊಂಡಿರುವುದು ದಾಖಲೆಗಳಿಂದ ಬಹಿರಂಗಗೊಂಡಿದೆ.
ಮುಡಾದಲ್ಲಿ ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣ, ರಾಜ್ಯದಲ್ಲಿ ಈಗಾಗಲೇ ದೊಡ್ಡ ಸದ್ದು ಮಾಡಿದ್ದು, ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿ ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ಸಹ ನಡೆಸಿದ್ದರು.
ಈ ಹಗರಣದ ಮಧ್ಯೆಯೇ ಈಗ ಮುಡಾದ ಮತ್ತೊಂದು ಹಗರಣವೂ ಬಯಲಾಗಿದೆ. ಈ ಹಿಂದೆ ಮುಡಾದ ಅಧ್ಯಕ್ಷರಾಗಿದ್ದ ಎಚ್.ವಿ ರಾಜೀವ್ ಮೈಸೂರಿನ ಜ್ಞಾನಗಂಗ ಗೃಹ ನಿರ್ಮಾಣ ಸಹಕಾರ ಸಂಘದಿಂದ ೮೪೮ ನಿವೇಶನಗಳ ಖಾತೆ ಮಾಡಿಸಿಕೊಂಡಿರುವುದು ಬಯಲಾಗಿದೆ.
ಜ್ಞಾನಗಂಗ ಗೃಹ ನಿರ್ಮಾಣ ಸಹಕಾರ ಸಂಘ ಮೈಸೂರಿನ ಕೂರ್ಗಳ್ಳಿ, ನಗರ್ತಹಳ್ಳಿ ಮತ್ತು ಬಲ್ಲಹಳ್ಳಿ ಗ್ರಾಮದಲ್ಲಿ ಒಟ್ಟು ೨೫೨ ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ ಮಾಡಿತ್ತು. ಈ ಬಡಾವಣೆ ನಿರ್ಮಾಣ ಮುಡಾದ ೨೦೧೮ರ ಆದೇಶದ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಹಾಗೆಯೇ ಬಡಾವಣೆ ನಿರ್ಮಾಣವಾದ ಕೆಲವು ಜಮೀನುಗಳ ಸರ್ವೆ ನಂಬರ್‌ಗಳ ವ್ಯಾಜ್ಯ ನ್ಯಾಯಾಲಯದಲ್ಲಿ ಇರುತ್ತೆ.
ಹೀಗಾಗಿ ಈ ಬಡಾವಣೆಗಳ ನಿವೇಶನ ಹಕ್ಕುಗಳನ್ನು ಮುಡಾ ವರ್ಗಾವಣೆ ಮಾಡಬಾರದು ಎಂದು ಆದೇಶವಿದೆ. ಹೀಗಿದ್ದರೂ ಎಚ್.ವಿ ರಾಜೀವ್ ೮೪೮ ನಿವೇಶನಗಳನ್ನು ಒಂದೇ ದಿನದಲ್ಲಿ ಮುಡಾದಿಂದ ಬಿಡಿಸಿಕೊಂಡು ಖಾತೆ ಮಾಡಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಮುಡಾ ಆಯುಕ್ತರ ಅನುಮೋದನೆ ಇಲ್ಲದೆ ಖಾತೆ ಮಾಡಿಸಿಕೊಳ್ಳಲಾಗಿದೆ ಎಂದು ದಾಖಲೆಗಳು ಲಭ್ಯವಾಗಿವೆ. ಆಯುಕ್ತರ ಅನುಮೋದನೆ ಇಲ್ಲದಿದ್ದರೂ ತಾಂತ್ರಿಕ ಶಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಿವೇಶನ ಬಿಡುಗಡೆಗೊಳಿಸಿಕೊಂಡಿದ್ದಾರೆ. ಈ ಬಗ್ಗೆ ವಿವರಣೆ ನೀಡುವಂತೆ ಸರ್ಕಾರದ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗೆ ಹಿಂದಿನ ಮುಡಾ ಆಯುಕ್ತ ನಟೇಶ್ ಪತ್ರ ಬರೆದಿರುವುದು ಬಹಿರಂಗಗೊಂಡಿದೆ.
ಜ್ಞಾನಗಂಗ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ರಾಜೀವ್ ಅವರೇ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.