ಸಿಎಂ ಹುದ್ದೆ, ಶಿವಾನಂದ, ಎಂಬಿಪಾ ನಡುವೆ ಮಾತಿನ ಸಮರ
(ಸಂಜೆವಾಣಿ ವಾರ್ತೆ)
ವಿಜಯಪುರ,ಸೆ.೮: ಸಿಎಂ ಸ್ಥಾನದ ವಿಚಾರವಾಗಿ ಜಿಲ್ಲೆಯ ಸಚಿವದ್ವಯರಾದ ಶಿವಾನಂದ ಪಾಟೀಲ ಹಾಗೂ ಎಂ.ಬಿ. ಪಾಟೀಲರ ಮಧ್ಯೆ ಮಾತಿನ ಸಮರವೇ ನಡೆದಿದೆ.
ಸಿಎಂ ಸ್ಥಾನಕ್ಕೆ ಎಂ.ಬಿ. ಪಾಟೀಲರಿಗಿಂತ ಹಿರಿಯರು ಪಕ್ಷದಲ್ಲಿ ಇದ್ದಾರೆ. ಅವರ ಸರದಿ ಬಳಿಕ ಎಂ.ಬಿ. ಪಾಟೀಲ ಸರದಿ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.
ಅದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ. ಪಾಟೀಲ ಅವರು, ನಾನು ಶಿವಾನಂದ ಪಾಟೀಲಗಿಂತ ಸೀನಿಯರ್ ಎಂದು ಮಾರುತ್ತರ ನೀಡಿದ್ದಾರೆ.
ಸಿದ್ದರಾಮಯ್ಯ ಇರುವವರೆಗೂ ಅವರೇ ಸಿಎಂ ಆಗಿರುತ್ತಾರೆ ಎಂದು ಹೇಳಿದ ಸಚಿವ ಶಿವಾನಂದ ಪಾಟೀಲ ಅವರು, ಬೆಂಗಳೂರಿನಲ್ಲಿ ಅಭಿವೃದ್ಧಿ ವಿಚಾರವಾಗಿ ನಾನು ಸುದ್ದಿಗೋಷ್ಟಿ ನಡೆಸಿದ್ದೆ.
ಆದರೆ ಅಲ್ಲಿ ಅಭಿವೃದ್ದಿ ಬಿಟ್ಟು ರಾಜಕೀಯ ಕುರಿತು ಪ್ರಶ್ನೆ ಕೇಳಲಾಯಿತು. ಪರಮೇಶ್ವರ ನಿವಾಸಕ್ಕೆ ಎಂ.ಬಿ. ಪಾಟೀಲ ಭೇಟಿ ತಪ್ಪೇನು?
ನಮ್ಮಲ್ಲಿ ಸೀನಿಯರ್ಸ್ ಬಹಳ ಜನರಿದ್ದಾರೆ. ಸೀನಿಯರ್ಸ್ ಬಳಿಕ ಜೂನಿಯರ್ಸ್ ಸರದಿ ಎಂದು ಉತ್ತರಿಸಿದ್ದೆ ಎಂದು ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಎಂ.ಬಿ. ಪಾಟೀಲ ಸಿಎಂ ಆದರೆ ನನ್ನ ಅಂಭ್ಯಂತರ ಇಲ್ಲ. ಈ ನಿಟ್ಟಿನಲ್ಲಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಶಾಸಕರು ನಿರ್ಧಾರ ಮಾಡುತ್ತಾರೆ. ಆದರೆ ನನ್ನ ಹೇಳಿಕೆಯನ್ನು ಮಾಧ್ಯಮಗಳು ವಿವಾದ ಮಾಡಿವೆ ಎಂದು ಸವಚಿವ ಶಿವಾನಂದ ಆರೋಪಿಸಿದರು.
ನಾನು ಸುದ್ದಿಗೋಷ್ಟಿ ನಡೆಸಿದ್ದು ನನ್ನ ಇಲಾಖೆಯ ಅಭಿವೃದ್ಧಿ ಕೆಲಸಗಳ ಕುರಿತು ಮಾಹಿತಿ ನೀಡಲು ಮಾತ್ರ. ನಾಲ್ಕು ಬೆಳೆಗಳಿಗೆ ಬೆಂಬಲ ಬೆಲೆ ಸಿಗುವ ಕುರಿತು ಹೇಳಲು ಪತ್ರಿಕಾಗೋಷ್ಠಿ ಕರೆದಿದ್ದೆ. ಅದನ್ನು ಬಿಟ್ಟು ಮಾಧ್ಯಮಗಳು ವಿವಾದವನ್ನೇ ಮಾಡಿದವು ಎಂದು ಹೇಳಿದರು.
ಕೆಲವೊಬ್ಬರು ರಾಜಕಾರಣ ಮಾಡುವುದರಲ್ಲೇ ನಿರತರಾಗಿದ್ದಾರೆ. ನಾನು ಅಭಿವೃದ್ಧಿ ಮಾಡುವುದರಲ್ಲಿ ನಿರತನಾಗಿದ್ದೇನೆ. ನನಗೆ ನೀಡಿದ ಮೂರು ಇಲಾಖೆಗಳಲ್ಲಿ ಅಭಿವೃದ್ಧಿ ಬಿಟ್ಟು ಬೇರೆ ಮಾಡಿಲ್ಲ ಎಂದರು.
ಯಾರು ಬೇಕಾದವರೂ ಸಿಎಂ ಆಗಬಹುದು. ಅದರಲ್ಲೇನಿದೆ.
ಖುದಾ ಮೆಹರ್ಬಾನ್ ಗಧಾ ಪೈಲ್ವಾನ್ ಎಂದು ಹೇಳಿಕೆ ನೀಡಿದರು. ಜಾರಕಿಹೋಳಿ, ಪರಮೇಶ್ವರ ಹಾಗೂ ಇತರರು ಸಿಎಂ ಗಾದಿಗೆ ಪೈಪೋಟಿ ವಿಚಾರವಾಗಿ ಮಾತನಾಡಿ, ಯಾರು ಬೇಕಾದವರು ಸಿಎಂ ಆಗಲಿ.
ಕಾಂಗ್ರೆಸ್ ನಲ್ಲಿ ಒಕ್ಕಟ್ಟಾಗಿದ್ದೇವೆ
ಯಾರೇ ಸಿಎಂ ಆದರೂ ಬೆಂಬಲವಿದೆ
ಹಾಗಾದರೆ ಸಿಎಂ ಸಿದ್ದರಾಮಯ್ಯ ಬದಲಾವಣೆ ಆಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಶಿವಾನಂದ ಪಾಟೀಲ, ಸಿಎಂ ಸಿದ್ದರಾಮಯ್ಯ ಬದಲಾವಣೆ ಆಗಲ್ಲ ಎಂಬ ವಿಶ್ವಾಸ ಇದೆ.
ಸಿದ್ದರಾಮಯ್ಯ ತಪ್ಪೇ ಮಾಡಿಲ್ಲ ಎಂದರೆ ಯಾಕೆ ಬದಲಾವಣೆ ಆಗಬೇಕು ಎಂದರು.
ಸಿಎಂಗಾಗಿ ಕಾಂಗ್ರೆಸ್ ನಲ್ಲಿ ರೇಸ್ ವಿಚಾರ ಪ್ರತಿಕ್ರಿಯೆ ನೀಡಿದ ಸಚಿವ ಶಿವಾನಂದ, ಅದೆಲ್ಲಾ ಮಾಧ್ಯಮ ಸೃಷ್ಟಿ. ವಿದ್ಯುನ್ಮಾನ ಮಾಧ್ಯಮಗಳು ಅಭಿವೃದ್ಧಿ ಬಗ್ಗೆ ಕೇಳಲ್ಲ. ಹೀಗಾಗೇ ನಾನು ಮಾಧ್ಯಮಗಳ ಮುಂದೆ ಬರಲ್ಲ ಎಂದರು.
ನಾನು ಕಾಂಗ್ರೆಸ್ ನಲ್ಲಿ ಸೀನಿಯರ್ ಶಿವಾನಂದ ಪಾಟೀಲ ಜೆಡಿಎಸ್ ನಿಂದ ಬಂದವರು ಎಂಬ ಎಂ.ಬಿ. ಪಾಟೀಲ ಹೇಳಿಕೆ ವಿಚಾರವಾಗಿ ಸಚಿವ ಶಿವಾನಂದ ಅವರು, ನಾನು ಜೆಡಿಎಸ್ ನಿಂದ ಬಂದವನಿರಲಿ, ಬಿಜೆಪಿಯಿಂದ ಬಂದವನಿರಲಿ. ನನ್ನನ್ನು ಕಾಂಗ್ರೆಸ್ ಗೆ ಕರೆ ತಂದವರು ಯಾರು ಎಂದು ಹೇಳಲಿ ಎಂದರು.