ನಟ ದರ್ಶನ್ ಬಿಡುಗಡೆಗೆ 2 ದಿನಗಳಲ್ಲಿ ಜಾಮೀನು ಅರ್ಜಿ
ಬೆಂಗಳೂರು,ಸೆ.೮-ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ಬಿಡುಗಡೆಗೆ ಇನ್ನೆರಡು ದಿನಗಳಲ್ಲಿ ಜಾಮೀನು ಅರ್ಜಿಯನ್ನು ಕೋರ್ಟ್ ಗೆ ಸಲ್ಲಿಸುವ ಸಾಧ್ಯತೆಯಿದೆ.
ಪ್ರಕರಣದ ಸಂಬಂಧ ೨೪ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಸಲ್ಲಿಸಿರುವ ೩೯೯೧ ಪುಟಗಳುಳ್ಳ ದೋಷಾರೋಪಪಟ್ಟಿಗೆ ಸಿಸಿ ನಂಬರ್ ಆಗಿದ್ದು, ಆರೋಪಿಗಳ ಪರ ವಕೀಲರಿಗೆ ನಾಳೆ ಚಾರ್ಜ್ ಶೀಟ್ ಪ್ರತಿ ಸಿಗಲಿದೆ.
ಬಳಿಕ ಅದನ್ನು ಪರಿಶೀಲನೆ ನಡೆಸಿ ಇನ್ನೆರಡು ದಿನಗಳಲ್ಲಿ ನಟ ದರ್ಶನ್ ಪರ ವಕೀಲರು ಜಾಮೀನು ಕೋರಿ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಹಾಕುವ ಸಾಧ್ಯತೆಯಿದೆ
ಚಾರ್ಜ್ ಶೀಟ್ ಸಲ್ಲಿಕೆಯಾಗುತ್ತಿದ್ದಂತೆ ವಕೀಲರ ಜತೆ ಚರ್ಚೆ ಮಾಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಜೈಲಿಗೆ ಜಾಮೀನು ವಕಾಲತ್ತಿಗೆ ಸಹಿ ಪಡೆದಿದ್ದಾರೆ.
ನ್ಯಾಯಾಧೀಶರ ಮುಂದೆ:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಬಂಧಿತರ ನ್ಯಾಯಾಂಗ ಬಂಧನ ಅವಧಿ ನಾಳೆ ಮುಗಿಯಲಿದ್ದು, ಆರೋಪಿಗಳು ಕಾರಾಗೃಹದಿಂದಲೇ ವಿಡಯೋ ಕಾನ್ಫರನ್ಸ್ ಮೂಲಕ ನ್ಯಾಯಾಧೀಶರ ಮುಂದೆ ನಾಳೆ ಹಾಜರಾಗಲಿದ್ದಾರೆ.
ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಕೆಲ ಆರೋಪಿಗಳಿಗೆ ವಿಶೇಷ ಆತಿಥ್ಯ ದೊರೆಯುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗಿತ್ತು.
ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ್ದರೆ, ಇನ್ನುಳಿದ ಆರೋಪಿಗಳನ್ನು ಮೈಸೂರು, ತುಮಕೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ವಿಜಯಪುರ ಮತ್ತು ಕಲಬುರಗಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಆರೋಪಿಗಳ ನ್ಯಾಯಾಂಗ ಬಂಧನ ನಾಳೆಗೆ ಮುಕ್ತಾಯವಾಗಲಿರುವ ಹಿನ್ನೆಲೆ ಆಯಾ ಕಾರಾಗೃಹಗಳಿಂದಲೇ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನಗರದ ೨೪ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ.
ನಾಳೆ ಜಾಮೀನು ಅರ್ಜಿ:
ಇದೇ ವೇಳೆ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ಎಲ್ಲಾ ೧೭ ಜನ ಆರೋಪಿಗಳ ಕೈ ಸೇರಲಿದೆ. ಚಾರ್ಜ್ ಶೀಟ್ ಕೈ ಸೇರಿದ ಬಳಿಕ ಹಲವು ಆರೋಪಿಗಳು ನಾಳೆಯೇ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವುದರಿಂದ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳು ನಾಳೆಯೇ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ನಡುವೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲು ಇದುವರೆಗೂ ಆರು ಪ್ರಮುಖ ವೈದ್ಯಕೀಯ ವರದಿಗಳು ಪೊಲೀಸರ ಕೈ ಸೇರಿದ್ದು,ನಟ ದರ್ಶನ್ ವಿರುದ್ಧವಾಗಿವೆ.
ವೈದ್ಯಕೀಯ ವರದಿ:
ಅವೆಲ್ಲವೂಗಳು ಆರೋಪಿಗಳಿಗೆ ವಿರುದ್ಧವಾಗಿರುವುದು ನಟ ದರ್ಶನ್ ಸೇರಿ ಇತರ ಆರೋಪಿಗಳಿಗೆ ಆತಂಕ ತಂದೊಡ್ಡಿದೆ

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮೃತದೇಹದ ಮೇಲೆ ಉಂಟಾದ ಗಾಯಗಳ ವಿವರವಿದ್ದರೆ ಎಫ್‌ಎಸ್‌ಎಲ್ ಹಾಗೂ ಡಿಎನ್‌ಎ ಮ್ಯಾಚಿಂಗ್ ವರದಿ,ತಲೆ ಮೇಲಿನ ಗಾಯದ ರೀತಿ ಬಗ್ಗೆ ವರದಿ,ಶೂ ಅಥವಾ ಚಪ್ಪಲಿಯಿಂದ ಎದೆಭಾಗಕ್ಕೆ ತುಳಿದ ಬಗ್ಗೆ ವರದಿ,ಶೂ ಅಥವಾ ಚಪ್ಪಲಿಯಿಂದ ಮಾರ್ಮಾಂಗಕ್ಕೆ ಒದ್ದ ಬಗ್ಗೆ ವರದಿಯೂ ಒಳಗೊಂಡಿದೆ.
ಕೊಲೆ ಸಂಬಂಧ ವೈದ್ಯರಿಂದ ಅಭಿಪ್ರಾಯ ವರದಿ ಪಡೆದ ಪೊಲೀಸರು,ಅವುಗಳ ವರಿದಿಗಳನ್ನು ಪಡೆದಿದ್ದು, ಮರಣೋತ್ತರ ಪರೀಕ್ಷೆ ವರದಿಯಲ್ಲಿ ರೇಣುಕಾಸ್ವಾಮಿ ದೇಹದ ಮೇಲಿನ ೩೯ ಗಾಯಗಳ ಬಗ್ಗೆ ಉಲ್ಲೇಖ ಆಗಿದೆ.
ತಲೆ, ಕಿವಿ, ಕಣ್ಣು, ಎದೆ, ಬೆನ್ನು, ಕೈ ಮೇಲಿನ ಗಾಯಗಳ ಬಗ್ಗೆ ವರದಿಯಲ್ಲಿದೆ. ಎಫ್‌ಎಸ್‌ಎಲ್ ಹಾಗೂ ಡಿಎನ್‌ಎ ಮ್ಯಾಚಿಂಗ್ ವರದಿ ಕೂಡ ಬಂದಿದ್ದು, ಆರೋಪಿಗಳ ಬಟ್ಟೆ, ಶೂ, ಚಪ್ಪಲಿಗಳ ಮೇಲೆ ಡಿಎನ್‌ಎ ಮ್ಯಾಚ್ ಆಗಿದೆ. ತಲೆ ಮೇಲಿನ ಗಾಯದ ಬಗ್ಗೆ ಪ್ರತ್ಯೇಕ ವರದಿ ನೀಡಿದ್ದಾರೆ. ಇದರ ಜತೆಗೆ ಶೂನಿಂದ ಮಾರ್ಮಾಂಗಕ್ಕೆ ಒದ್ದಿದ್ದ ಬಗ್ಗೆಯೂ ವರದಿ ನೀಡಿದ್ದು ಇದೆಲ್ಲ ಆರೋಪಿಗಳಿಗೆ ಮುಂದೆ ಸಂಕಷ್ಟ ತರಲಿದೆ.
ಬಿರಿಯಾನಿ ತಿನ್ನಿಸಿದ ಗ್ಯಾಂಗ್:
ಇನ್ನು ಚಾರ್ಜ್ ಶೀಟ್‌ನಲ್ಲಿ ಡೆವಿಲ್ ಗ್ಯಾಂಗ್ ಅಮಾನವೀಯ ಹಲ್ಲೆ ನಡೆಸುವ ಜತೆಗೆ ವಿಕೃತಿ ಮೆರೆದಿದ್ದಾರೆ. ಅಪಹರಣ ಮಾಡಿ ಶೆಡ್ ಗೆ ಕರೆತಂದ ಬಳಿಕ ರೇಣುಕಾಸ್ವಾಮಿಗೆ ಬಲವಂತವಾಗಿ ಬಿರಿಯಾನಿ ತಿನ್ನಿಸಿದ್ದಾರೆ. ನಾನು ಜಂಗಮ ನಾನ್ ವೆಜ್ ತಿನ್ನಲ್ಲ ಎಂದು ಹೇಳಿದರೂ ಊಟಕ್ಕೆ ಬೆಲೆ ಕೊಡೋ ಎಂದು ಭಯ ಪಡಿಸಿ, ಬೇಡ ಬೇಡ ಎಂದರೂ ಚಿಕನ್ ಬಿರಿಯಾನಿ ತಿನ್ನಿಸಿ ಕ್ರೌರ್ಯ ಮೆರೆದಿರುವುದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಲಿಂಗದ ಕರಡಿಕೆ ಸುಲಿಗೆ:
ಮತ್ತೊಂದೆಡೆ ರೇಣುಕಾಸ್ವಾಮಿ ಅಪಹರಣದ ವೇಳೆ ಸುಲಿಗೆ ಮಾಡಲಾಗಿದೆ, ಮಾರ್ಗ ಮಧ್ಯೆ ಎ ೪ ಆರೋಪಿ ರಾಘವೇಂದ್ರ ರೇಣುಕಾಸ್ವಾಮಿಯ ಚೈನ್, ರಿಂಗ್, ವಾಚ್ ಮತ್ತು ಲಿಂಗದ ಕರಡಿಕೆ ಸುಲಿಗೆ ಮಾಡಿರುವುದು ಸಹ ಉಲ್ಲೇಖಿಸಲಾಗಿದೆ.
ರೇಣುಕಾಸ್ವಾಮಿ ಕೊಲೆಗೂ ಮೊದಲು, ನಂತರ ಏನೆಲ್ಲಾ ಪಿತೂರಿ, ಸಂಭಾಷಣೆ ನಡಿತು ಎನ್ನುವುದು ಆರೋಪಿಗಳ ಮೊಬೈಲ್ ರಿಟ್ರೀವ್ ವೇಳೆ ಬಯಲಿಗೆ ಬಂದಿದೆ. ಅದರಲ್ಲಿ ರೇಣುಕಾಸ್ವಾಮಿ ಕೊಲೆಗೂ ಮೊದಲು- ಕೊಲೆ ನಂತರ ಪವಿತ್ರಗೌಡ ಹಾಗೂ ದರ್ಶನ್ ವಾಟ್ಸಾಪ್ ಕಾಲ್‌ನಲ್ಲಿ ೧೬ ಸೆಕೆಂಡ್ ಮಾತನಾಡಿರುವುದು ಬೆಳಕಿಗೆ ಬಂದಿದೆ.