ಮಣಿಪುರ ಹಿಂಸಾಚಾರ- 6 ಸಾವು
ಗುವಾಹಟಿ,ಸೆ.೮- ಮಣಿಪುರದಲ್ಲಿ ಹಿಂಸಾಚಾರದಿಂದ ನಲುಗಿದ ಬಳಿಕ ಇದೀಗ ಜಿರಿಬಾಮ್ ಜಿಲ್ಲೆಯಲ್ಲಿ ಸಮುದಾಯಗಳ ನಡುವೆ ಮತ್ತೆ ಹೊಸದಾಗಿ ಹಿಂಸಾಚಾರ ತಲೆದೋರಿದ ಹಿನ್ನೆಲೆಯಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಮುದಾಯಗಳ ನಡುವೆ ಮತ್ತೆ ಹೊಸದಾಗಿ ಆರಂಭವಾಗಿರುವ ಸಂಘರ್ಷದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಣ್ಗಾವಲು ಇರಿಸಿದೆ.
ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಮಿಲಿಟರಿ ಹೆಲಿಕಾಪ್ಟರ್ ನಿಯೋಜಿಸಲು ಮತ್ತು ದಾಳಿಕೋರರನ್ನು ಪತ್ತೆಹಚ್ಚಲು ಡ್ರೋನ್-ಪತ್ತೆ ವ್ಯವಸ್ಥೆ ಹೊಂದಿದ ಹೆಚ್ಚುವರಿ ಪಡೆ ನಿಯೋಜಿಸಲು ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಸೂಚನೆ ನೀಡಿದ್ದಾರೆ
ಹೊಸದಾಗಿ ಸಂಘರ್ಷ ಮತ್ತು ಸಾವು ನೋವು ನಡೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಬಿಜೆಪಿ, ನಾಗಾ ಪೀಪಲ್ಸ್ ಫ್ರಂಟ್ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ -ಎನ್‌ಪಿಪಿ ಒಳಗೊಂಡಿರುವ ಆಡಳಿತಾರೂಢ ಒಕ್ಕೂಟದ ಶಾಸಕರೊಂದಿಗೆ ತುರ್ತು ಸಭೆ ನಡೆಸಿ ಪರಿಸ್ಥಿತಿಯ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ
ಕೂಡಲೇ ರಾಜಭವನಕ್ಕೆ ಧಾವಿಸಿದ ಸಿಂಗ್, ರಾಜ್ಯಪಾಲ ಎಲ್ ಆಚಾರ್ಯ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿ, ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದಿದ್ದಾರೆ
ಜಿರಿಬಾಮ್‌ನಿಂದ ಪೂರ್ವಕ್ಕೆ ೨೦೦ ಕಿಮೀ ದೂರದಲ್ಲಿರುವ ಇಂಫಾಲ್ ಕಣಿವೆಯ ಬಿಷ್ಣುಪುರ್ ಜಿಲ್ಲೆಯ ಮೊಯಿರಾಂಗ್‌ನಲ್ಲಿ ಶಂಕಿತ ಉಗ್ರಗಾಮಿಗಳು ದೀರ್ಘ-ಶ್ರೇಣಿಯ ರಾಕೆಟ್‌ಗಳನ್ನು ಹಾರಿಸಿ ಪಾದ್ರಿಯೊಬ್ಬರನ್ನು ಕೊಂದು ಇತರ ಐವರನ್ನು ಗಾಯಗೊಂಡ ನಂತರ ಹಿಂಸಾಚಾರ ಉಲ್ಬಣಗೊಂಡಿದೆ.
ಉಗ್ರರು ಜಿರಿಬಾಮ್‌ನ ನುಂಗ್‌ಚಾಪ್ಪಿ ಗ್ರಾಮದ ಮೇಲೆ ದಾಳಿ ಮಾಡಿ ಯುರೆಂಬಮ್ ಕುಲೇಂದ್ರ ಸಿಂಘಾ ಅವರನ್ನು ಹತ್ಯೆ ಮಾಡಿದ್ದಾರೆ