ಬ್ರೂನೈ, ಸಿಂಗಾಪುರ ಪ್ರವಾಸ ಫಲಪ್ರದ
ನವದೆಹಲಿ,ಸೆ.೬- ಮೂರು ದಿನಗಳ ಸಿಂಗಾಪುರ ಮತ್ತು ಬ್ರೂನೈ ದೇಶಗಳ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಗೆ ಆಗಮಿಸಿದ್ದಾರೆ.
ಸಿಂಗಾಪುರವನ್ನು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾದರಿ ಎಂದು ಕರೆದ ಪ್ರಧಾನಿ ಅವರು ಅಲ್ಲಿನ ಪ್ರಧಾನಿ ಲಾರೆನ್ಸ್ ವಾಂಗ್ ಅವರೊಂದಿಗಿನ ಮಾತುಕತೆಯ ಸಮಯದಲ್ಲಿ ಭಾರತ ತನ್ನದೇ ಆದ “ಹಲವು ಸಿಂಗಾಪುರಗಳನ್ನು” ರಚಿಸಲು ಬಯಸಿದೆ ಎಂದು ಹೇಳಿದ್ದಾರೆ
ಭಾರತ-ಸಿಂಗಪುರ ನಡುವೆ ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಜೊತೆಗೆ ಭಾರತ ಮತ್ತು ಸಿಂಗಾಪುರದ ಸಂಬಂಧಗಳನ್ನು “ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ” ಗೆ ಪೂರಕ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
ನಗರ-ರಾಜ್ಯದ ಕಂಪನಿಗಳು ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು ೬೦ ಶತಕೋಟಿ ಡಾಲರ್ ಹೂಡಿಕೆ ಮಾಡಿದ್ದಾರೆ. ಉಭಯ ದೇಶಗಳ ಪ್ರಧಾನಿಗಳ ಮಾತುಕತೆ ಫಲಪ್ರದವಾಗಿದೆ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ತಿಳಿಸಿದೆ.
ಸಿಂಗಪೂರ ಭೇಟಿ ಸಮಯದಲ್ಲಿ ತಂತ್ರಜ್ಞಾನ, ಆರೋಗ್ಯ, ವ್ಯಾಪಾರ, ಕೌಶಲ್ಯ ಮತ್ತು ಹೆಚ್ಚಿನವು ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಭಾರತ-ಸಿಂಗಾಪುರ್ ಪಾಲುದಾರಿಕೆ ಇನ್ನಷ್ಟು ಆಳಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದಾರೆ” ಎಂದು ಹೇಳಿದೆ.
ಸಿಂಗಾಪುರದಲ್ಲಿ ಉನ್ನತ ವ್ಯಾಪಾರ ನಾಯಕರು ಮತ್ತು ಸಿಇಒಗಳೊಂದಿಗೆ ದುಂಡುಮೇಜಿನ ಸಭೆ ನಡೆಸಿದರು, ಆರ್ಥಿಕ ಸಂಬಂಧ ಗಟ್ಟಿಗೊಳಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ. ಜೊತೆಗೆ ಭಾರತದಲ್ಲಿ ಬಂಡವಾಳ ಹೂಡುವಂತೆ ಉದ್ಯಮಿಗಳಿಗೆ ಪ್ರಧಾನಿ ಆಹ್ವಾನ ನೀಡಿದ್ದಾರೆ ಎಂದು ಹೇಳಿದೆ
ಹೂಡಿಕೆ ಮತ್ತು ನಾವೀನ್ಯತೆಗೆ ಉತ್ತೇಜನ ನೀಡುವ ಭಾರತದಲ್ಲಿ ನಡೆಯುತ್ತಿರುವ ಸುಧಾರಣೆಗಳನ್ನು ಎತ್ತಿ ಹಿಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನಯಾನ, ಇಂಧನ ಮತ್ತು ಕೌಶಲ್ಯ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಭಾರತದಲ್ಲಿ ಹೂಡಿಕೆ ಅವಕಾಶಗಳನ್ನು ನೋಡಲು ಸಿಂಗಾಪುರದ ಉದ್ಯಮಿಗಳನ್ನು ಆಹ್ವಾನಿಸಿದ್ದಾರೆ