ರಸ್ತೆ ಅಪಘಾತ:ಮೂವರು ಬೆಂಗಳೂರಿಗರ ಸಾವು
ಬಾಗಲಕೋಟೆ,ಸೆ.೬-ಗಣೇಶ ಚತುರ್ಥಿಯ ರಜೆಗೆಂದು ಊರಿಗೆ ಬಂದಿದ್ದ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಸೇರಿ ಮೂವರು ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ನಗರದ ಹೆಲಿಪ್ಯಾಡ್ ರಸ್ತೆಯಲ್ಲಿ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ.
ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ರಜನಿ ಒಂದಕುದರಿ (೩೪), ಬಾಗಲಕೋಟೆಯ ಬಿವಿವಿ ಸಂಘದ ದಂತ ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ ಶೃತಿ ಒಂದಕುದರಿ (೩೨) ಹಾಗೂ ಅಭಿಷೇಕ ದೋತ್ರೆ (೨೦) ಮೃತಪಟ್ಟವರು.
ಇಬ್ಬರು ಮಹಿಳೆಯರು ಸ್ಕೂಟಿಯಲ್ಲಿ ಹೊರಟಿದ್ದು, ಹೆಲಿಪ್ಯಾಡ್ ರಸ್ತೆಯ ಬಳಿ ರಸ್ತೆಯ ತಿರುವು ಪಡೆಯುವಾಗ ಸ್ಕೂಟಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿದೆ. ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟರೆ, ಯುವಕ ಮತ್ತು ಇನ್ನೋರ್ವ ಮಹಿಳೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ರಜನಿ, ರಜೆಗೆಂದು ಬಾಗಲಕೋಟೆಗೆ ಬಂದಿದ್ದರು. ತನ್ನ ದೂರದ ಸಂಬಂಧಿ ಶೃತಿ ಜತೆಗೆ ಹೊರಗಡೆ ಊಟ ಮಾಡಿ ಮರಳಿ ಮನೆಗೆ ಹೊರಟಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ಬಾಗಲಕೋಟೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.