ಬಿಜೆಪಿಯಿಂದ ೪೦ ಮಂದಿ ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ
ನವದೆಹಲಿ,ಸೆ.೬- ಜಮ್ಮು ಕಾಶ್ಮೀರ ವಿಧಾನಸಭೆಗೆ ಈ ತಿಂಗಳ ೧೮ ರಿಂದ ಮುರು ಹಂತದಲ್ಲಿ ಚುನಾವಣೆ ನಡೆಯಲಿದ್ದು ಬಿಜೆಪಿ ೪೦ ಮಂದಿ ಸದಸ್ಯರ ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.ಕೇಂದ್ರ ಸಚಿವ ಅಮಿತ್ ಶಾ ಅವರು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುವ ಒಂದು ದಿನ ಮುಂಚಿತವಾಗಿ, ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ,ಜೆ ಪಿ ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ನಿತಿನ್ ಗಡ್ಕರಿ, ಮನೋಹರ್ ಲಾಲ್ ಖಟ್ಟರ್ ಮತ್ತು ಜಿ ಕಿಶನ್ ರೆಡ್ಡಿ ಅವರ ಹೆಸರನ್ನು ಸಹ ಹೆಸರಿಸಿದೆ.ಹಿಮಾಚಲ ಪ್ರದೇಶದ ರಾಜ್ಯ ಸಚಿವ ಜೈ ರಾಮ್ ಠಾಕೂರ್, ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಸಂಸದ ಅನುರಾಗ್ ಠಾಕೂರ್ ಅವರು ಜಮ್ಮು ಮತ್ತು ಕಾಶ್ಮೀರದ ಚುನಾವಣೆಯ ಎರಡನೇ ಹಂತದಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸಲಿದ್ದಾರೆ. ೪೦ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮಾಜಿ ಸಂಸದೆ ಸ್ಮೃತಿ ಇರಾನಿ ಕೂಡ ಇದ್ದಾರೆ.
ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣಗೆ ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದೆ. ಪಕ್ಷದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಮಿತ್ ಶಾ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಮೊದಲ ಹಂತದ ಚುನಾವಣೆಗಳಲ್ಲಿ ೨೧೯ ಅಭ್ಯರ್ಥಿಗಳು ಕಣದಲ್ಲಿದ್ದಾರೆ, ಸೆಪ್ಟೆಂಬರ್ ೧೮ ರಂದು ಮತದಾನ ನಡೆಯಲಿದೆ.ಇದು ೩೭೦ ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಕಾಶ್ಮೀರದಲ್ಲಿ ನಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆಯಾಗಿದೆ.