ಕೊಲೆ ಬಳಿಕ ದರ್ಶನ್ ಪಾರ್ಟಿ ಫೋಟೋ ವೈರಲ್
ಬೆಂಗಳೂರು,ಸೆ.೫-ರೇಣುಕಾಸ್ವಾಮಿ ಕೊಲೆ ನಡೆದು, ದರ್ಶನ್ ಹಾಗೂ ಇತರೆ ಆರೋಪಿಗಳ ಬಂಧನ ಆದ ಬಳಿಕ, ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ಸ್ಥಳ ಮಹಜರು ಮಾಡುವಾಗ ತೆಗೆದ ಚಿತ್ರವೊಂದು ವೈರಲ್ ಆಗಿದೆ. ಚಿತ್ರದಲ್ಲಿ ನಟ ದರ್ಶನ್, ಆರೋಪಿಗಳಾದ ವಿನಯ್, ಪ್ರದೋಶ್ ಅವರುಗಳಿದ್ದು, ಅವರ ಜೊತೆ ನಟ ಚಿಕ್ಕಣ್ಣ ಸಹ ಚಿತ್ರದಲ್ಲಿದ್ದಾರೆ.
ಕೊಲೆ ಮಾಡುವ ಮುನ್ನ ಆರೋಪಿ ದರ್ಶನ್ ಸೇರಿ ಇನ್ನೂ ಕೆಲವರು ಬೆಂಗಳೂರಿನ ಸ್ಟೋನಿ ಬ್ರೂಕ್ ಹೋಟೆಲ್‌ನಲ್ಲಿ ಬಿಂದಾಸ್ ಆಗಿ ಪಾರ್ಟಿ ಮಾಡಿದ್ದರು. ಆ ಪಾರ್ಟಿಯಲ್ಲಿ ದರ್ಶನ್, ವಿನಯ್, ಪ್ರದೋಶ್ ಹಾಗೂ ಚಿಕ್ಕಣ್ಣ ಇನ್ನಿತರರು ಭಾಗಿಯಾಗಿದ್ದರು. ದರ್ಶನ್ ಅನ್ನು ಬಂಧಿಸಿದ ಬಳಿಕ ಸ್ಟೋನಿ ಬ್ರೂಕ್?ಗೆ ಕರೆತಂದಿದ್ದ ಪೊಲೀಸರು ಅಲ್ಲಿ ಪಾರ್ಟಿ ನಡೆದ ಸ್ಥಳದಲ್ಲಿಯೇ ಅನುಕ್ರಮದಲ್ಲಿ ಆರೋಪಿಗಳನ್ನು ಕೂರಿಸಿ ಸ್ಥಳ ಮಹಜರು ಮಾಡಿದ್ದರು. ಸ್ಥಳ ಮಹಜರಿನ ಚಿತ್ರ ವೈರಲ್ ಆಗಿದೆ.
ಸ್ಟೋನಿ ಬ್ರೂಕ್‌ನಲ್ಲಿ ದರ್ಶನ್ ಹಾಗೂ ಗೆಳೆಯರು ಪಾರ್ಟಿ ಮಾಡಿದ್ದ ಜಾಗದಲ್ಲಿಯೇ ಅವರನ್ನೆಲ್ಲ ಕೂರಿಸಿ ಪೊಲೀಸ್ ಸಿಬ್ಬಂದಿಯೊಬ್ಬರು ಅವರ ಮುಂದೆ ಕೂತು ಲ್ಯಾಪ್‌ಟಾಪ್‌ನಲ್ಲಿ ಎಲ್ಲ ಅಂಶಗಳನ್ನು ನೋಟ್ ಮಾಡಿಕೊಳ್ಳುತ್ತಿರುವ ದೃಶ್ಯ ಚಿತ್ರದಲ್ಲಿ ಸೆರೆಯಾಗಿದೆ. ದರ್ಶನ್ ಸಪ್ಪಗೆ ಮುಖ ಮಾಡಿ ಕೂತಿರುವುದು ಚಿತ್ರದಲ್ಲಿ ಕಾಣುತ್ತಿದೆ. ಮಾತ್ರವಲ್ಲದೆ ಚಿತ್ರದಲ್ಲಿ ನಟ ಚಿಕ್ಕಣ್ಣ ಸಹ ದರ್ಶನ್‌ರ ಪಕ್ಕ ಕೂತಿದ್ದಾರೆ. ಚಿಕ್ಕಣ್ಣ ಸಹ ತೀವ್ರ ಆತಂಕದಲ್ಲಿರುವುದು ತಿಳಿಯುತ್ತಿದೆ. ಸ್ಟೋನಿ ಬ್ರೂಕ್ ಮಾಲೀಕ ವಿನಯ್ ಸಹ ಚಿತ್ರದಲ್ಲಿದ್ದು ಆ ವ್ಯಕ್ತಿ ಸಹ ಆತಂಕದಲ್ಲಿದ್ದಾನೆ. ಇತರೆ ಕೆಲವು ಪೊಲೀಸ್ ಸಿಬ್ಬಂದಿ ಸಹ ಚಿತ್ರದಲ್ಲಿದ್ದಾರೆ.
ಸ್ಟೋನಿ ಬ್ರೂಕ್‌ನಲ್ಲಿ ಎ೨ ದರ್ಶನ್, ಎ೩ ಪವನ್, ಎ೧೦ ವಿನಯ್, ಂಎ೧೧ ನಾಗರಾಜ್, ಎ೧೪ ಪ್ರದೋಷ್ ಅವರುಗಳನ್ನು ಸ್ಟೋನಿ ಬ್ರೂಕ್‌ಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು.
ನಟ ಚಿಕ್ಕಣ್ಣ ಸಹ ಕೊಲೆ ನಡೆದ ದಿನ ಪಾರ್ಟಿಯಲ್ಲಿದ್ದ ಕಾರಣ ಅವರನ್ನೂ ಸಹ ಮಹಜರಿಗೆ ಕರೆಸಲಾಗಿತ್ತು. ಆದರೆ ಪ್ರಕರಣದಲ್ಲಿ ಚಿಕ್ಕಣ್ಣ ಹೇಳಿಕೆಯನ್ನಷ್ಟೆ ದಾಖಲಿಸಿದ್ದು, ಅವರನ್ನು ಆರೋಪಿ ಮಾಡಲಾಗಿಲ್ಲ.