ಶಾಲೆಯಲ್ಲಿ ಬಾಲಕನ ಗುಂಡಿನ ದಾಳಿ ನಾಲ್ವರ ಸಾವು
ಜಾರ್ಜಿಯಾ,ಸೆ.೫-ಅಮೆರಿಕದ ಜಾರ್ಜಿಯಾದ ಪ್ರೌಢಶಾಲೆಯೊಂದರಲ್ಲಿ ಅತ್ಯಂತ ದಾರುಣ ಘಟನೆ ನಡೆದಿದೆ. ೧೪ ವರ್ಷದ ಬಾಲಕ ತನ್ನ ಶಾಲೆಯಲ್ಲೇ ಮನಬಂದಂತೆ ಗುಂಡು ಹಾರಿಸಿದ ಘಟನೆಯಲ್ಲಿ ನಾಲ್ವರು ಮೃತಪಟ್ಟು ೯ ಮಂದಿ ಗಾಯಗೊಂಡಿದ್ದಾರೆ.
ಘಟನೆಯು ಅಟ್ಲಾಂಟಾದ ಉತ್ತರಕ್ಕೆ ಸುಮಾರು ಒಂದು ಗಂಟೆಯ ವಿಂಡರ್‌ನಲ್ಲಿರುವ ಅಪಾಲಾಚಿ ಹೈಸ್ಕೂಲ್‌ನಲ್ಲಿ ಸಂಭವಿಸಿದೆ.
ಶಂಕಿತ ಆರೋಪಿ ಶೂಟರ್ ಕೋಲ್ಟ್ ಕ್ರೇ (೧೪) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಹತ್ಯೆಯಾದವರಲ್ಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಸೇರಿದ್ದಾರೆ ಎಂದು ಜಾರ್ಜಿಯಾ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ನ ನಿರ್ದೇಶಕ ಕ್ರಿಸ್ ಹೋಸಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆರೋಪಿಯನ್ನು ೧೪ ವರ್ಷದ ಕೋಲ್ಟ್ ಗ್ರೇ ಎಂದು ಗುರುತಿಸಲಾಗಿದೆ, ಆತ ಶಾಲೆಯ ವಿದ್ಯಾರ್ಥಿ, ಹೋಸಿ ಹೇಳಿದ್ದಾರೆ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಆತನ ಕೊಲೆ ಆರೋಪ ಹೊರಿಸಲಾಗಿದೆ.
ಗುಂಡಿನ ದಾಳಿಯ ಹಿಂದಿನ ಉದ್ದೇಶದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಗುಂಡಿನ ಸದ್ದು ಕೇಳಿಸಿದ್ದರಿಂದ ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಡೆಸ್ಕ್‌ಗಳ ಹಿಂದೆ ಅಡಗಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.
ಗುಂಡಿನ ದಾಳಿಯ ನಂತರ ವಿದ್ಯಾರ್ಥಿಗಳು ತಮ್ಮ ತರಗತಿಗಳಲ್ಲಿ ಆಶ್ರಯ ಪಡೆದಿದ್ದಾರೆ. ಕೆಲವು ವಿದ್ಯಾರ್ಥಿಗಳು ಆಶ್ರಯ ಪಡೆಯಲು ಫುಟ್ಬಾಲ್ ಸ್ಟೇಡಿಯಂನತ್ತ ಓಡಿದ್ದಾರೆ.
ಸುಮಾರು ೧,೯೦೦ ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದೆ.
ಪೊಲೀಸರು ಶಾಲೆಯ ಆವರಣವನ್ನು ಸುತ್ತುವರಿದಿದ್ದಾರೆ. ತಮ್ಮ ಮಕ್ಕಳು ಸುರಕ್ಷಿತವಾಗಿದ್ದಾರೆಯೇ ಎಂದು ತಿಳಿಯಲು ಪೋಷಕರು ಶಾಲೆಗೆ ಧಾವಿಸಿದ್ದಾರೆ.
ಕೋಲ್ಟ್ ಗ್ರೇ ಚಟುವಟಿಕೆಗಳ ಬಗ್ಗೆ ಈಗಾಗಲೇ ಅನುಮಾನ ವ್ಯಕ್ತವಾಗಿದೆ .ಮತ್ತು ಕಳೆದ ವರ್ಷ ಮೇನಲ್ಲಿ ಎಫ್‌ಬಿಐ ಅವರ ಕುಟುಂಬವನ್ನು ವಿಚಾರಣೆ ನಡೆಸಿದೆ.