ವೈದ್ಯೆ ಅತ್ಯಾಚಾರ ಹತ್ಯೆ ಖಂಡಿಸಿ ಪ್ರತಿಭಟನೆ
ಕೋಲ್ಕತ್ತಾ,ಸೆ.೫-ಕೋಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಕ್ರೂರ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ಪ್ರತಿಭಟನೆಗಳು ಮುಂದುವರೆದಿವೆ. ಪ್ರತಿಭಟನೆ ಭಾಗವಾಗಿ ಪಶ್ಚಿಮ ಬಂಗಾಳದ ಜೂನಿಯರ್ ಡಾಕ್ಟರ್ಸ್ ಫ್ರಂಟ್ ಕ್ಯಾಂಡಲ್ ಮಾರ್ಚ್ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಒಂದು ಗಂಟೆ ಅವಧಿ ಕಾಲ ಇಡಿ ಕೋಲ್ಕತ್ತಾ ಪೂರ್ಣ ಕತ್ತಲೆಯಲ್ಲಿ ಮುಳುಗಿದೆ.ಜಾಯ್ ಸಿಟಿಯ ಪ್ರತಿಷ್ಠಿತ ವಿಕ್ಟೋರಿಯಾ ಮೆಮೋರಿಯಲ್ ಹಾಲ್ ಮತ್ತು ರಾಜಭವನ ಕೂಡ ಬೆಳಕಿನಿಂದ ದೂರವಿತ್ತು.
ನಗರದ ನಿವಾಸಿಗಳು ಒಂದು ಗಂಟೆ ಕಾಲ ಲೈಟ್ ಬಂದ್ ಮಾಡಿ ಮೇಣದಬತ್ತಿಗಳನ್ನು ಹಿಡಿದು ಬೀದಿಗಿಳಿದಿದ್ದಾರೆ. ಕೋಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿ ಇರುವ ಲಾಲ್ಬಜಾರ್ ಬಳಿ ನೂರಾರು ಕಿರಿಯ ವೈದ್ಯರು ಕ್ಯಾಂಡಲ್ ಮಾರ್ಚ್ ನಡೆಸಿದ್ದಾರೆ ಮತ್ತು ನ್ಯಾಯಕ್ಕಾಗಿ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ್ದಾರೆ.ಸಾವಿರಾರು ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಂಗಾಳ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಅವರು ರಾಜಭವನದಲ್ಲಿ ಮೇಣದಬತ್ತಿಯನ್ನು ಬೆಳಗಿಸಿ, ಬೆಳಕಿಗೆ ಹೆದರಿದಾಗ ಕತ್ತಲೆ ಪ್ರೀತಿಯಾಗುತ್ತದೆ ಎಂದು ಹೇಳಿದ್ದಾರೆ. ಸರಿಯಾಗಿ ರಾತ್ರಿ ೯ ಗಂಟೆಗೆ, ವಿಕ್ಟೋರಿಯಾ ಸ್ಮಾರಕ ಮತ್ತು ರಾಜಭವನದಂತಹ ಪ್ರಮುಖ ಸ್ಥಳಗಳು ನಗರ, ಉಪನಗರಗಳು ಮತ್ತು ಜಿಲ್ಲೆಗಳಲ್ಲಿನ ಮನೆಗಳು ಪ್ರತಿಭಟನೆಯ ಭಾಗವಾಗಿ ಕತ್ತಲೆಯಲ್ಲಿ ಮುಳುಗಿದವು. ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಸಹ, ಜನರು ಸಂಜೆ ತಡವಾಗಿ ಬೀದಿಗಿಳಿದು ಆರ್‌ಜಿಕೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಟಾರ್ಚ್‌ಗಳು, ಮೇಣದಬತ್ತಿಗಳು ಮತ್ತು ಮೊಬೈಲ್ ಫೋನ್ ದೀಪಗಳನ್ನು ಬೆಳಗಿಸಿ ಪ್ರತಿಭಟಿಸಿದ್ದಾರೆ.
ಪ್ರತಿಭಟನೆಗೆ ಕರೆ ನೀಡಿದ್ದ ಪಶ್ಚಿಮ ಬಂಗಾಳದ ಜೂನಿಯರ್ ಡಾಕ್ಟರ್ಸ್ ಫ್ರಂಟ್, ಬೆಳಕಾಗಲಿ, ನ್ಯಾಯವಾಗಲಿ ಎಂದು ಪ್ರತಿಭಟನೆಗೆ ಹೆಸರಿಟ್ಟಿದೆ. ಇಂದು ಹೈಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಗೂ ಮುನ್ನವೇ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನ್ಯಾಯದಾನ ಮತ್ತಷ್ಟು ವಿಳಂಬವಾಗದಂತೆ ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಈ ಪ್ರಕರಣವು ಪ್ರಸ್ತುತ ಸುಪ್ರೀಂ ಕೋರ್ಟ್ ಪೀಠದಲ್ಲಿ ವಿಚಾರಣೆಯಲ್ಲಿದೆ.