ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಬೆಂಗಳೂರು, ಸೆ. ೪- ರಾಜ್ಯದಲ್ಲಿ ಅತಿ ಹೆಚ್ಚು ಬಿಜೆಪಿ ಸದಸ್ಯತ್ವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಬಿ.ವೈ ವಿಜಯೇಂದ್ರ ಹೇಳಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೆಪ್ಟೆಂಬರ್ ೨೫ರವರೆಗೆ ಮೊದಲ ಹಂತದ ಸದಸ್ಯತ್ವ ನೋಂದಣಿ ನಡೆಯಲಿದ್ದು, ಅಕ್ಟೋಬರ್ ೧ ರಿಂದ ೨ನೇ ಹಂತದ ನೋಂದಣಿ ಆರಂಭವಾಗಲಿದೆ. ಎರಡನೇ ಹಂತದಲ್ಲಿ ರೈಲ್ವೆ ಹಾಗೂ ಬಸ್ ನಿಲ್ದಾಣದಲ್ಲಿ ಸಾಮೂಹಿಕ ಸದಸ್ಯತ್ವ ಆಂದೋಲನ ನಡೆಸಲಾಗುವುದು ಎಂದರು.
ಪ್ರತಿಯೊಂದು ಬೂತ್‌ನಲ್ಲಿ ಮೂವರು, ನಾಲ್ವರು ಕಾರ್ಯಕರ್ತರನ್ನು ಜೋಡಿಸುವ ಕೆಲಸ ಆಗಲಿದೆ. ಪ್ರತಿ ಜಿಲ್ಲೆಗೂ ಸದಸ್ಯತ್ವ ಅಭಿಯಾನಕ್ಕೆ ಒಬ್ಬ ಶಾಸಕರನ್ನು ನೇಮಕ ಮಾಡಲಾಗುವುದು ಎಂದರು.
ಬಿಜೆಪಿ ಜನರಿಗೆ ಸ್ಪಂದಿಸುವ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದೆ. ಕೋವಿಡ್ ದಿನಗಳಲ್ಲೂ ಎಲ್ಲರೂ ಸಂಕಷ್ಟದಲ್ಲಿದ್ದಾಗ ಬಿಜೆಪಿ ಕಾರ್ಯಕರ್ತರು ಮನೆಯಲ್ಲಿ ಕೂರದೆ ಜನರ ಸಂಕಷ್ಟಗಳಿಗೆ ಸ್ಪಂದಿಸಿದರು. ಆ ಸಂದರ್ಭದಲ್ಲಿ ಉಚಿತ ಮೆಡಿಕಲ್ ಕಿಟ್‌ನ್ನು ಕೊಟ್ಟಿದ್ದೇವು ಎಂದು ವಿಜಯೇಂದ್ರ ನೆನಪು ಮಾಡಿದರು.
ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ತಮ್ಮ ಸದಸ್ಯತ್ವ ನೋಂದಣಿ ಮಾಡಿಕೊಂಡಿದ್ದಾರೆ. ಮೋದಿ ಅವರ ಕನಸಾದ ವಿಕಸಿತ ಭಾರತವನ್ನು ನನಸು ಮಾಡುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಇರುವ ಪಕ್ಷ. ಪಕ್ಷಕ್ಕೆ ಜನಪರ ಕಾಳಜಿ ಇಲ್ಲ. ಅಧಿಕಾರ ಇಲ್ಲ ಎಂದರೆ ಕಾಂಗ್ರೆಸ್‌ನವರು ನೀರಿನಿಂದ ಹೊರ ಬಿದ್ದ ಮೀನಿನಂತಾಗುತ್ತಾರೆ ಎಂದು ವ್ಯಂಗ್ಯವಾಡಿದರು.
ಆರ್. ಅಶೋಕ್ ಹೇಳಿಕೆ
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಮತ ಬಂದಿದೆಯೋ ಅದರಲ್ಲಿ ಶೇ. ೭೫ ರಷ್ಟು ಸದಸ್ಯತ್ವ ಆಗಲೇಬೇಕು. ಇದು ನಮಗಿರುವ ಗುರಿ .ಈ ಗುರಿಯನ್ನು ತಲುಪುತ್ತೇವೆ ಎಂದರು
ಬಿಜೆಪಿ ಕಾರ್ಯಕರ್ತರ ಪಕ್ಷ. ಕಾಂಗ್ರೆಸ್‌ಗೆ ಕಾರ್ಯಕರ್ತರು ಮುಖ್ಯವಲ್ಲ. ಕುಟುಂಬ ಇದೆಯೋ ಇಲ್ಲವೋ ಎಂಬುದು ಮುಖ್ಯ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಕಾರ್ಯಕರ್ತರ ಪಕ್ಷವಾದರೆ ಕಾಂಗ್ರೆಸ್ ನಾಯಕ ಆಧಾರಿತ ಪಕ್ಷ ಎಂದು ಟೀಕಿಸಿದ ಅವರು, ಕಾಂಗ್ರೆಸ್‌ನಲ್ಲಿ ಹೆಚ್ಚು ಸದಸ್ಯತ್ವ ಇದೆ ಎಂದು ತೋರಿಸಲು ನಾಯಕರುಗಳೇ ೧ ರೂಪಾಟಿ ಕಟ್ಟಿ ಸದಸ್ಯತ್ವ ಮಾಡುತ್ತಿದ್ದರು. ಆದರೆ ಬಿಜೆಪಿಯಲ್ಲಿ ಉಚಿತವಾಗಿ ಸದಸ್ಯತ್ವ ಮಾಡುತ್ತಿದ್ದೇವೆ ಎಂದರು.
ಛಲವಾದಿ ಹೇಳಿಕೆ
ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಬಿಜೆಪಿ ಇಂದು ಹೆಚ್ಚು ಸದಸ್ಯನ್ನು ಹೊಂದಿರುವ ಪಕ್ಷವಾಗಿದೆ. ೧೮ ಕೋಟಿ ಸದಸ್ಯರು ಬಿಜೆಪಿಯಲ್ಲಿದ್ದಾರೆ. ರಾಜ್ಯದಲ್ಲೂ ಒಂದು ಕೋಟಿ ಸದಸ್ಯರನ್ನು ಮಾಡಲಾಗಿತ್ತು ಎಂದರು
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಹೋರಾಟದ ಫಲದಿಂದ ಪಕ್ಷ ಬೆಳೆದಿದ್ದನ್ನು ನಾನು ನೋಡಿದ್ದೇನೆ. ವಿಜಯೇಂದ್ರ ಅವರು ಅಧ್ಯಕ್ಷರಾದ ಮೇಲೆ ಪಕ್ಷಕ್ಕೆ ನವಚೈತನ್ಯ ಸಿಕ್ಕಿದೆ. ಹಬ್ಬದೋಪಾದಿಯಲ್ಲಿ ಮನೆ ಮನೆಗೂ ಸದಸ್ಯರ ಅಭಿಯಾನ ಮಾಡೋಣ ಎಂದರು.
ರಾಜ್ಯದಲ್ಲಿರುವ ಪರಿಸ್ಥಿತಿಯನ್ನು ನೋಡಿದರೆ ಯಾವ ಸಂದರ್ಭದಲ್ಲಾದರೂ ಚುನಾವಣೆ ಎದುರಿಸಬಹುದು ಎಂದು ಅವರು ಹೇಳಿದರು
ಈ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನದ ರಾಜ್ಯ ಪ್ರಭಾರಿ ಸುಧಾಕರರೆಡ್ಡಿ, ಸಂಸದ ಗೋವಿಂದ ಕಾರಜೋಳ, ಶಾಸಕರುಗಳಾದ ಸುನಿಲ್‌ಕುಮಾರ್, ಸಿ.ಟಿ. ರವಿ, ಅಶ್ವತ್ಥ್‌ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.