ಭರ್ತಿಯತ್ತ ತುಂಗಭದ್ರಾ ಜಲಾಶಯ
ಕೊಪ್ಪಳ,ಸೆ.೪:ತುಂಗಭದ್ರಾ ಜಲಾಶಯದ ೧೯ನೇ ಗೇಟಿನ ಚೈನ್ ತುಂಡಾಗಿ ಜಲಾಶಯಕ್ಕೆ ತಾತ್ಕಾಲಿಕ ಗೇಟ್ ಅಳವಡಿಸಿದ ನಂತರ ಇದೀಗ ಜಲಾಶಯ ಭರ್ತಿಯತ್ತ ಸಾಗಿದೆ.ಇದರಿಂದಾಗಿ ಜಲಾಶಯಕ್ಕೆ ಮತ್ತೆ ಜೀವಕಳೆ ಬಂದಿದೆ.
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದಲ್ಲಿ ನೀರಿನ ಅಲೆಗಳು ಅಪ್ಪಳಿಸುತ್ತಿರುವುದನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಆ. ೧೦ ರಂದು ಜಲಾಶಯದ ೧೯ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿತ್ತು. ೧೦೫.೭೮೮ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಆದರೆ, ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿದ್ದರಿಂದ ಅಪಾರ ಪ್ರಮಾಣದ ನೀರು ಪೋಲಾಗಿತ್ತು.
ಈ ವೇಳೆ ಒಂದೇ ವಾರದಲ್ಲಿ ೪೫ಕ್ಕೂ ಹೆಚ್ಚು ಟಿಎಂಸಿ ನೀರು ವ್ಯರ್ಥವಾಗಿತ್ತು. ಆದರೆ, ಹಯದ್ರಾಬಾದ್‌ನಿಂದ ಆಗಮಿಸಿದ್ದ ಕ್ರಸ್ಟ್‌ಗೇಟ್ ತಜ್ಞ ಕನ್ಹಯ್ಯ ನಾಯ್ಡು ನೇತೃತ್ವದ ಸಿಬ್ಬಂದಿ ತಾತ್ಕಾಲಿಕ ಗೇಟ್ ಅಳವಡಿಸಿ ಸೋರಿಕೆಯಾಗುತ್ತಿದ್ದ ನೀರನ್ನು ತಡೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
ಕನ್ಹಯ್ಯನಾಯ್ಡು ಸ್ಟಾಪ್‌ಲಾಗ್ ಗೇಟ್ ಅಳವಡಿಸಲು ಹರಸಾಹಸ ಪಟ್ಟಿತ್ತು. ಒಂದು ವಾರದ ಕಾಲ ಶ್ರಮಿಸಿ ಆ. ೧೭ ರಂದು ೪ ಎಲಿಮೆಂಟ್‌ಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿ ಹರಿದು ಹೋಗುತ್ತಿರುವ ನೀರನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.
ಜಲಾಶಯದಲ್ಲಿ ೭೧ ಟಿಎಂಸಿ ನೀರು ಸಂಗ್ರಹವಾಗಿತ್ತು. ಜಲಾಶಯ ತುಂಬುತ್ತದೋ ಇಲ್ಲವೋ ಎಂಬ ಆತಂಕವೂ ಎದುರಾಗಿತ್ತು. ಇದೀಗ ಜಲಾಶಯಕ್ಕೆ ಮತ್ತೆ ಜೀವಕಳೆ ಬಂದಿದೆ. ಭರ್ತಿಯತ್ತ ಸಾಗಿದೆ. ೧೦೫.೭೮೮ ಟಿಎಂಸಿ ನೀರು ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಈಗ ೧೦೦ ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.ಜಲಾಶಯ ಭರ್ತಿಗೆ ೫ ಟಿಎಂಸಿ ನೀರಿನ ಅವಶ್ಯಕತೆ ಇದೆ.
ಜಲಾಶಯಕ್ಕೆ ೩೦ ಸಾವಿರ ಕ್ಯೂಸೆಕ್ ನೀರಿನ ಒಳಹರಿವಿದ್ದು, ೧೦ ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದೇ ಪ್ರಮಾಣದಲ್ಲಿ ನೀರು ಬಂದರೆ ೨ ದಿನಗಳಲ್ಲಿ ಜಲಾಶಯ ಮತ್ತೆ ಭರ್ತಿಯಾಗುವ ಆಶಾಭಾವ ಮೂಡಿದೆ.