ಬ್ರೂನೈ ರಾಜಾ ಬೊಲ್ಕಿಯಾ-ಮೋದಿ ಚರ್ಚೆ
ಬಂದಾರ್ ಸೆರೆ ಬೆಗವಾನ್,ಸೆ.೪:ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರಮೋದಿ ಬ್ರೂನೈ ಪ್ರವಾಸ ಕೈಗೊಂಡಿದ್ದು, ಪ್ರಧಾನಿ ಅವರು ಬ್ರೂನೈ ದೊರೆ ಮತ್ತು ಪ್ರಧಾಣಿ ಹಸನಲ್ ಬೊಲ್ಕಿಯಾ ಅವರನ್ನು ಭೇಟಿ ಮಾಡಿ ಎರಡೂ ದೇಶಗಳ ನಡುವಣ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಕುರಿತು ಸಮಾಲೋಚನೆ ನಡೆಸಿದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಫೊಟೊಗಳನ್ನು ಹಂಚಿಕೊಂಡಿರುವ ಮೋದಿ ಅವರು, ಬೊಲ್ಕಿಯಾ ಅವರನ್ನು ಭೇಟಿ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಭದ್ರಪಡಿಸುವಮಾರ್ಗಗಳನ್ನು ಒಳಗೊಂಡಿತ್ತು. ವ್ಯಾಪಾರ ಸಂಬಂಧ, ವಾಣಿಜ್ಯ ಸಂಪರ್ಕ ಹಾಗೂ ಕೌಶಲ್ಯ ವಿನಿಮಯವನ್ನು ಮತ್ತಷ್ಟು ವಿಸ್ತರಿಸಲಿದ್ದೇವೆ ಎಂದು ಹೇಳಿದ್ದಾರೆ.
ಎರಡೂ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ ೪೦ನೇ ವರ್ಷಾಚರಣೆಯ ಸಂದರ್ಭದಲ್ಲೇ ಉಭಯ ನಾಯಕರ ಭೇಟಿ ನಡೆದಿರುವುದು ಮಹತ್ವ ಪಡೆದುಕೊಂಡಿದೆ.
’ಆಕ್ಟ್ ಈಸ್ಟ್ ’ ಮತ್ತು ಇಂಡೋ ಫೆಸಿಫಿಕ್ ವಿಷನ್‌ನಲ್ಲಿ ಭಾರತಕ್ಕೆ ಬ್ರೂನೈ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಇದಕ್ಕೂ ಮುನ್ನ ಬ್ರೂನೈಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ಭಾರತೀಯ ಹೈ ಕಮಿಷನ್ ಮುಖ್ಯ ಕಚೇರಿಯನ್ನು ಮೋದಿ ಅವರು ಉದ್ಘಾಟಿಸಿದರು. ಇದು ಭಾರತೀಯ ಸಮುದಾಯದ ಜನರಿಗೆ ನೆರವಾಗಲಿದೆ ಎಂದು ಅವರು ಬಣ್ಣಿಸಿದ್ದಾರೆ.