ಸಿಎಂ ವಿರುದ್ಧ ಬಿಜೆಪಿ ವಿನಾಕಾರಣ ಆರೋಪ: ಶರಣಪ್ರಕಾಶ್
ಮಳಖೇಡ,ಸೆ.3: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಅನಗತ್ಯವಾಗಿ ಟಾರ್ಗೆಟ್ ಮಾಡುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಲ್ಲಿ ಕೇಸ್ ನಡೆಯುತ್ತಿದೆ. ಏನಾಗುತ್ತದೋ ನೋಡಬೇಕಿದೆ. ಈ ಮಧ್ಯೆ ಬಿಜೆಪಿ ನಾಯಕರು ಮುಖ್ಯಮಂತ್ರಿಗಳನ್ನು ಟಾರ್ಗೆಟ್ ಮಾಡಲು ಯತ್ನಿಸುತ್ತಿದ್ದಾರೆ. ನಾವು ಕೊಟ್ಟಿರುವ ಐದು ಗ್ಯಾರಂಟಿಗಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ಸಿದ್ದಾರ್ಥ ಟ್ರಸ್ಟ್ ಗೆ ಭೂಮಿ ನೀಡಿರುವ ವಿಷಯಕ್ಕೆ ರಾಜ್ಯಪಾಲರು ವಿವರಣೆ ಕೇಳಿದ ಕುರಿತು ಪ್ರಸ್ತಾಪಿಸಿದ ಅವರು ರಾಜ್ಯಪಾಲರಿಗೆ ಏನು ಉತ್ತರ ನೀಡಬೇಕೋ ನೀಡುತ್ತದೆ ಎಂದು ಸ್ಪಷ್ಟನೆ ನೀಡಿದರು.
ಮಲ್ಲಿಕಾರ್ಜುನ ಖರ್ಗೆಯವರು 50 ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಅವರು ಯಾವತ್ತೂ ವೈಯಕ್ತಿಕ ಲಾಭಕ್ಕಾಗಿ ಅಧಿಕಾರದ ದುರ್ಬಳಕೆ ಮಾಡಿಕೊಂಡಿಲ್ಲ. ನಿಯಮಗಳ ಪ್ರಕಾರವೇ ಭೂಮಿ ನೀಡಲಾಗಿದೆ. ಅಲ್ಲಿ ಅವರು ಮೆಡಿಕಲ್ ಕಾಲೇಜು ಕಟ್ಟಿ ಲಾಭ ಮಾಡಿಕೊಳ್ಳುತ್ತಿಲ್ಲ ಎಂದು ನುಡಿದರು.
ಛಲವಾದಿ ನಾರಾಯಣಸ್ವಾಮಿ ಅವರು ಮೊದಲು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಮುರಗೇಶ್ ನಿರಾಣಿ ಅವರಂತೆ ನಾವು ಸ್ವಂತಕ್ಕಾಗಿ ಭೂಮಿ ಪಡೆದಿಲ್ಲ ಎಂದು ಹೇಳಿದರು.
ನಾಲ್ಕು ಜನರಿಗೆ ಅನುಕೂಲ ಆಗಲಿ ಅಂತ ಭೂಮಿ ಪಡೆಯಲಾಗಿದೆ. ನಾರಾಯಣಸ್ವಾಮಿ ಅವರು ನಮ್ಮನ್ನು ಅವರಂತೆಯೇ ಅಂದುಕೊಂಡಿದ್ದಾರೆ. ಬಿಜೆಪಿಯವರು ಎಷ್ಟು ಭೂಮಿ ಹೊಡೆದಿದ್ದಾರೆ ಎಂಬುದು
ಮುಂದೆ ಬಂದು ಚರ್ಚಿಸಲಿ ಎಂದರಲ್ಲದೆ, ಇಂತಹ ವಿಷಯಗಳನ್ನು ಚರ್ಚಿಸಲು ಬಿಜೆಪಿ ನಾಯಕರು ನಾರಾಯಣ ಸ್ವಾಮಿಯವರನ್ನು ಮುಂದೆ ಬಿಡುತ್ತಿದ್ದಾರೆ ಎಂದು ಮುಗುಳ್ನಕ್ಕರು.