ಜೈಲಿನಿಂದ ಪರಾರಿ ಯತ್ನ ೧೨೯ ಕೈದಿಗಳ ಸಾವು
ಕಿಶನ್ಶಾ (ಕಾಂಗೊ),ಸೆ.೩-ಕಾಂಗೋ ರಾಜಧಾನಿಯ ಮುಖ್ಯ ಕಾರಾಗೃಹ ಕಿನ್ಶಾಸಾದ ಕೇಂದ್ರ ಮಕಲಾ ಜೈಲಿನಿಂದ ಜೈಲಿನ ಕಂಬಿ ಮುರಿದು ತಪ್ಪಿಸಿಕೊಂಡು ಹೊರಬರಲು ಯತ್ನಿಸುತ್ತಿದ್ದ ೧೨೯ ಕೈದಿಗಳು ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಇಂದು ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
ಪಡೆಗಳು ಹಾರಿಸಿದ ಗುಂಡುಗಳಿಂದ ೨೪ ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ಕಾಂಗೋಲೀಸ್ ಆಂತರಿಕ ಸಚಿವ ಜಾಕ್ವೆಮಿನ್ ಶಬಾನಿ ಇಂದು ಸಾಮಾಜಿಕ ಮಾಧ್ಯಮದ ಮೂಲಕ ವಿವರಗಳನ್ನು ತಿಳಿಸಿದ್ದಾರೆ.
ಜೈಲಿನ ಆಡಳಿತ ಕಟ್ಟಡ, ಅದರ ಆಹಾರ ಡಿಪೋಗಳು ಮತ್ತು ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಇದರಲ್ಲಿ ಸುಮಾರು ೫೯ ಜನರು ಗಾಯಗೊಂಡಿದ್ದಾರೆ.
ಘಟನೆಯ ಕುರಿತು ತನಿಖೆ ನಡೆದಿದೆ.
ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಎಲ್ಲ ಕೈದಿಗಳನ್ನು ಕೊಲ್ಲಲಾಗಿದೆ ಎಂದು ಜೈಲು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಕಾಲಾ ಜೈಲು ಕಾಂಗೋದ ಮುಖ್ಯ ಜೈಲು, ಇದು ೧,೫೦೦ ಕೈದಿಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ ಆದರೆ ೧೨,೦೦೦ ಕೈದಿಗಳನ್ನು ಅದರಲ್ಲಿ ಇರಿಸಲಾಗಿದೆ ಎಂದು ಹೇಳಿದೆ. ಬಹುತೇಕರು ವಿಚಾರಣೆ ಪೂರ್ಣಗೊಳ್ಳಲು ಕಾಯುತ್ತಿದ್ದಾರೆ. ಈಗಾಗಲೇ ಜೈಲಿನಲ್ಲಿ ಕೈದಿಗಳು ಜೈಲು ಮುರಿದು ಪರಾರಿಯಾಗಿರುವ ಘಟನೆಗಳು ನಡೆದಿವೆ. ಭಾನುವಾರ ಮಧ್ಯರಾತ್ರಿ ಆರಂಭವಾದ ಗುಂಡಿನ ದಾಳಿ ಸೋಮವಾರ ಬೆಳಗಿನ ಜಾವದವರೆಗೂ ಮುಂದುವರಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.