ಭಯೋತ್ಪಾದಕರ ದಾಳಿ ಇಬ್ಬರಿಗೆ ಗಾಯ
ಇಂಪಾಲ (ಮಣಿಪುರ), ಸೆ. ೩- ಡ್ರೋನ್ ಮೂಲಕ ಭಯೋತ್ಪಾದಕರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮೂವರು ಗಾಯಗೊಂಡಿರುವ ಘಟನೆ ಮಣಿಪುರದ ಕಾಂಗ್ ಪೋಕ್ಸಿ ತಗ್ಗು ಪ್ರದೇಶದ ಸೆಜಮ ಚಿರಾಂಗ್ ಗ್ರಾಮದಲ್ಲಿ ನಡೆದಿದ್ದು, ಭದ್ರತಾಪಡೆಗಳು ಪ್ರತಿ ದಾಳಿ ನಡೆಸಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಸಂಜೆ ೬.೩೦ರವೇಳೆಗೆ ವಸತಿ ಪ್ರದೇಶದ ಮೇಲೆ ಈ ದಾಳಿ ನಡೆದಿದ್ದು ಮನೆ ಛಾವಣಿಗಳ ಮೇಲೆ ಬಾಂಬ್ ಸ್ಫೋಟಿದ ಹಿನ್ನೆಲೆ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಭಾನುವಾರ ಬಾಂಬ್ ಮತ್ತು ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು ೯ ಮಂದಿ ಗಾಯಗೊಂಡಿದ್ದ ಘಟನೆ ಕೌತ್ರುಕದಿಂದ ಮೂರು ಕಿಮೀ ದೂರದ ಪ್ರದೇಶದಲ್ಲಿ ನಡೆದಿತ್ತು. ಆ ಘಟನೆ ಮಾಸುವ ಮುನ್ನವೇ ನಿನ್ನೆ ಸಂಜೆ ಸಹ ಡ್ರೋನ್ ಮೂಲಕ ನಡೆದಿರುವ ದಾಳಿಯನ್ನು ಮುಖ್ಯಮಂತ್ರಿ ಬೀರೇನ್ ಸಿಂಗ್ ಭಯೋತ್ಪಾದಕರ ದಾಳಿ ಎಂದು ತಿಳಿಸಿದ್ದಾರೆ ಹಾಗೂ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಘಟನೆಯನ್ನು ಮಣಿಪುರ ರಾಜ್ಯ ಸರ್ಕಾರ ಖಂಡಿಸುತ್ತದೆ. ಇಂತಹ ಪ್ರಚೋದಿತ ದಾಳಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಭಯೋತ್ಪಾದನೆ ಹೋರಾಟಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಈ ನಡುವೆ ಜಿಲ್ಲೆಯ ಕಾಂಗ್ ಚುಪ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಭದ್ರತಾಪಡೆಗಳು ಡ್ರೋನ್ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.