ಕೊಲೆ ಆರೋಪಿಗೆ ಗುಂಡೇಟು
ಅಮೇಥಿ,ಅ.೫-ಅಮೇಥಿಯಲ್ಲಿ ದಲಿತ ಶಿಕ್ಷಕ, ಆತನ ಪತ್ನಿ ಹಾಗೂ ಇಬ್ಬರು ಬಾಲಕಿಯರ ಹತ್ಯೆಯ ಆರೋಪಿ ಚಂದನ್ ವರ್ಮಾ ಪೊಲೀಸ್ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದಾನೆ.
ಯುಪಿ ಎಸ್‌ಟಿಎಫ್ ಆರೋಪಿಯನ್ನು ನೋಯ್ಡಾದ ಜೆವಾರ್ ಟೋಲ್ ಪ್ಲಾಜಾದಲ್ಲಿ ಬಂಧಿಸಿದೆ.
ಕಾರ್ಯಾಚರಣೆ ವೇಳೆ ಚಂದನ್, ಸಬ್ ಇನ್ಸ್‌ಪೆಕ್ಟರ್ ಮದನ್ ಕುಮಾರ್ ಸಿಂಗ್ ಅವರಿಂದ ಪಿಸ್ತೂಲ್ ಕಿತ್ತುಕೊಂಡು ಗುಂಡು ಹಾರಿಸಿ ಓಡಿ ಹೋಗಲು ಯತ್ನಿಸಿದ್ದ ಎನ್ನಲಾಗಿದೆ ಪ್ರತಿಯಾಗಿ ಪೊಲೀಸರು ಆತ್ಮರಕ್ಷಣೆಗಾಗಿ ಆತನನ್ನು ಹಿಂಬಾಲಿಸಿ ಚಂದನ್ ಬಲಗಾಲಿಗೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ .
ಘಟನೆಯ ವಿಡಿಯೋ ಹೊರಬಿದ್ದಿದ್ದು, ಅದರಲ್ಲಿ ಚಂದನ್ ಅಳುತ್ತಿರುವುದು ಕಂಡು ಬಂದಿದೆ.
ಬಂದಿರುವ ಮಾಹಿತಿಯ ಪ್ರಕಾರ, ಮೋಹನ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಚಂದನ್ ವರ್ಮಾ ಪೊಲೀಸರ ಗುಂಡುಗಳಿಂದ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಯಕ್ತಿಕ ದ್ವೇಷದಿಂದ ನಾಲ್ವರನ್ನು ಬರ್ಬರವಾಗಿ ಕೊಂದ ಆರೋಪ ಚಂದನ್ ಮೇಲಿದೆ. ಇದೀಗ ಈ ಬಗ್ಗೆ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.
ಮೃತ ಶಿಕ್ಷಕ ಸುನಿಲ್ ಭಾರ್ತಿ ಅವರ ಪತ್ನಿ ಪೂನಂ ಭಾರತಿ ಅವರೊಂದಿಗೆ ಚಂದನ್ ಅನೈತಿಕ ಸಂಬಂಧ ಹೊಂದಿದ್ದರು ಮತ್ತು ಅದಕ್ಕಾಗಿಯೇ ಈ ಭೀಕರ ಘಟನೆ ನಡೆದಿದೆ ಎಂದು ಹೇಳಲಾಗಿದೆ.