ವೈದ್ಯರ ಹತ್ಯೆ: ಬಾಲಕನ ಸೆರೆ
ನವದೆಹಲಿ,ಅ.೪- ಆಗ್ನೇಯ ದೆಹಲಿಯ ಕಾಳಿಂದಿ ಕುಂಜ್ ಪ್ರದೇಶದ ನಿಮಾ ನರ್ಸಿಂಗ್ ಹೋಮ್‌ನಲ್ಲಿ ವೈದ್ಯರನ್ನು ಹತ್ಯೆ ಮಾಡಿದ ಪ್ರಕರಣ ಕುರಿತಂತೆ ಪೊಲೀಸರು ಅಪ್ರಾಪ್ತೆ ಬಾಲಕನನ್ನು ಬಂಧಿಸಿದ್ದಾರೆ.
ಡಾ ಜಾವೇದ್ ಅಖ್ತರ್ ಕೊಲೆಯಾದ ವೈದ್ಯರು. ಹತ್ಯೆಗೆ ಸಂಬಂಧಿಸಿದಂತೆ ೧೬ ವರ್ಷದ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ೧೬ ವರ್ಷದ ಬಾಲಕ ಅಪರಾಧವನ್ನು ತಪ್ಪೊಪ್ಪಿಕೊಂಡಿದ್ದಾನೆ.
ಡಾ.ಅಖ್ತರ್ ಕಳೆದ ಎರಡು ವರ್ಷಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದರು ಎಂದು ನರ್ಸಿಂಗ್ ಹೋಂನಲ್ಲಿ ಉದ್ಯೋಗಿಯಾಗಿರುವ ಅಬಿದ್ ತಿಳಿಸಿದ್ದಾನೆ.
ಈ ಅಪರಾಧಕ್ಕಾಗಿ ಯುವಕರಿಬ್ಬರ ರಾತ್ರಿ ೧ ಗಂಟೆ ಸುಮಾರಿಗೆ ಪ್ರಥಮ ಚಿಕಿತ್ಸೆಗಾಗಿ ಖಡ್ಡಾ ಕಾಲೋನಿಯ ಮೂರು ಹಾಸಿಗೆಗಳ ನೀಮಾ ಆಸ್ಪತ್ರೆಗೆ ಬಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗ ಅವರು ಯುನಾನಿ ವೈದ್ಯ ಡಾ. ಜಾವೇದ್ ಅಖ್ತರ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎನ್ನಲಾಗಿದೆ.
ಸುಮಾರು ೧೬ ವರ್ಷ ವಯಸ್ಸಿನ ಪ್ರಮುಖ ಆರೋಪಿ ಅಪರಾಧ ಮಾಡಿದ ನಂತರ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತನ್ನ ಫೋಟೋವನ್ನು ಅಪ್ಲೋಡ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ೨೦೨೪ರಲ್ಲಿ ಕೊಲೆ ಮಾಡಿದ್ದೇನೆ ಎಂಬ ಶೀರ್ಷಿಕೆ ಬರೆದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನರ್ಸಿಂಗ್ ಹೋಂನ ಮಹಿಳಾ ನರ್ಸ್ ಹಾಗೂ ಆಕೆಯ ಪತಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಂಟಿ ಪೊಲೀಸ್ ಕಮಿಷನರ್ (ದಕ್ಷಿಣ ರೇಂಜ್) ಎಸ್‌ಕೆ ಜೈನ್ ಮಾತನಾಡಿ, ಇದೇ ಪ್ರದೇಶದಲ್ಲಿ ವಾಸಿಸುವ ಇಬ್ಬರು ಯುವಕರು ಈ ಕೃತ್ಯ ಎಸಗಿದ್ದಾರೆ.
ಆರೋಪಿಗಳಲ್ಲಿ ಒಬ್ಬನನ್ನು ಹಾಪುರದಿಂದ ಬಂಧಿಸಲಾಗಿದೆ, ಕೊಲೆಯ ಹಿಂದಿನ ಉದ್ದೇಶ ತಿಳಿದಿಲ್ಲ ಎಂದು ಜೈನ್ ಹೇಳಿದ್ದಾರೆ. ಅಪ್ರಾಪ್ತ ವಯಸ್ಕನಾಗಿರುವ ಎರಡನೇ ಆರೋಪಿಯನ್ನು ಬಂಧಿಸಲು ತಂಡಗಳು ಕ್ರಮ ಕೈಗೊಂಡಿವೆ. ಇಬ್ಬರೂ ಡ್ರೆಸ್ಸಿಂಗ್‌ಗಾಗಿ ಕಾಂಪೌಂಡರ್‌ರನ್ನು ಭೇಟಿಯಾಗಿದ್ದಾರೆ ನಂತರ ಅವರ ಕ್ಯಾಬಿನ್‌ನಲ್ಲಿ ಯುನಾನಿ ವೈದ್ಯರ ಮೇಲೆ ಗುಂಡು ಹಾರಿಸಿದ್ದಾರೆ. ಬಂಧಿತ ಯುವಕ ವೈದ್ಯರ ಮೇಲೆ ಗುಂಡು ಹಾರಿಸಿದ್ದಾನೆ. ನರ್ಸಿಂಗ್ ಹೋಂನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಅವರ ಕೃತ್ಯಗಳು ಸೆರೆಯಾಗಿವೆ ಎಂದು ಜೈನ್ ಹೇಳಿದ್ದಾರೆ.