ಬೆಂಗಳೂರಿನ ಕೆಲ ಕಾಲೇಜುಗಳಿಗೆ ಬಾಂಬ್ ಬೆದರಿಕೆ
ಬೆಂಗಳೂರು,ಅ.4-ಶಾಲೆಗಳ ಬಳಿಕ ನಗರದ ಕೆಲವು ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು,ಆತಂಕ ಸೃಷ್ಟಿಯಾಗಿತ್ತು. ಹನುಮಂತನಗರದ ಬಿಎಂಎಸ್ ಕಾಲೇಜು, ವಿ.ವಿ.ಪುರಂನಲ್ಲಿರುವ ಬಿಐಟಿ ಕಾಲೇಜು ಸೇರಿದಂತೆ ಕೆಲವು ಕಾಲೇಜುಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಪತ್ರ ಬಂದಿದೆ.
ಈ ಸಂಬಂಧ ಮಾಹಿತಿಯನ್ನು ನೀಡಿದ ಕೂಡಲೇ ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕಿಯ ಸಿಬ್ಬಂದಿ ಧಾವಿಸಿದ್ದು, ಪರಿಶೀಲನೆ ನಡೆಸಿದಾಗ ಇದು ಹುಸಿ ಇ-ಮೇಲ್ ಬೆದರಿಕೆ ಎನ್ನುವುದು ಪತ್ತೆಯಾಗಿದೆ.
ಇನ್ನು ಇದೇ ಸೆ.28 ರಂದು ಬೆಂಗಳೂರಿನ ಪ್ರತಿಷ್ಠಿತ ತಾಜ್ ವೆಸ್ಟ್ ಎಂಡ್ ಹೋಟೆಲ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಹೋಟೆಲ್ ಒಟೆರಾ ಗೆ ಇ-ಮೇಲ್ ಮೂಲಕ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿದ್ದರು.
ಇದಾದ ಆರು ದಿನಗಳ ಬಳಿಕ ಬೆಂಗಳೂರಿನ ಕೆಲವು ಕಾಲೇಜುಗಳಿಗೆ ಇ-ಮೇಲ್ ಮುಖಾಂತರ ಬಾಂಬ್ ಬೆದರಿಕೆ ಬಂದಿದೆ.
ಕೆಲವು ತಿಂಗಳುಗಳ ಹಿಂದೆ ಶಾಲೆಗಳಿಗೆ ಇದೇ ರೀತಿ ಇ-ಮೇಲ್ ನಲ್ಲಿ ಬಾಂಬ್ ಬೆದರಿಕೆ ಕರೆ ಬಂದಿದ್ದು, ಈ ಸಂಬಂಧ ತನಿಖೆಯನ್ನು ನಡೆಸುತ್ತಿರುವಾಗಲೇ ಕಾಲೇಜುಗಳಿಗೆ ಬೆದರಿಕೆ ಕರೆ ಬಂದಿದೆ.