ಇಸ್ರೇಲ್ ದಾಳಿಗೆ ಲೆನನಾನ್‌ನಲ್ಲಿ ಇಲ್ಲಿಯವರೆಗೆ ೨೦೦೦ ಮಂದಿ ಸಾವು
ಟೆಲ್ ಅವೀವಾ,ಅ.೪- ಕಳೆದ ವರ್ಷದಿಂದ ಲೆಬನಾನ್ ಮೇಲೆ ಇಸ್ರೇಲ್ ದಾಳಿ ಆರಂಭಿಸಿದ ದಿನದಿಂದ ಇಲ್ಲಿಯವರೆಗೆ ಕನಿಷ್ಠ ೨,೦೦೦ ಮಂದಿಯನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿದೆ.
ಅದರಲ್ಲಿ ಬಹುತೇಕರು ಕಳೆದ ಎರಡು ವಾರಗಳಿಂದ ಇಸ್ರೇಲ್ ನಡೆಸುತ್ತಿರುವ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದು ಬಹುತೇಕರು ಹಿಜ್ಬುಲ್ಲಾ ಉಗ್ರರು ಎಂದು ಹೇಳಲಾಗಿದೆ. ಜೊತೆಗೆ ಸಾವಿರಾರು ಮಂದಿ ಗಾಯಗೊಂಡಿದ್ದು ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ
ಇರಾನ್ ಬೆಂಬಲಿತ ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ವಾಯುದಾಳಿ ನಡೆಸಿದೆ.ಅದಕ್ಕೆ ಪ್ರತಿಯಾಗಿ ಇರಾನ್ ಮತ್ತು ಹಿಜ್ಬುಲ್ಲಾ ಕೂಡ ದಾಳಿ ನಡೆಸಿದ್ದು ಲೆಬನಾನ್, ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹಿಜ್ಬುಲ್ಲಾ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ದಾಳಿ ಮಾಡುತ್ತಿದೆ. ಇದಕ್ಕೆ ಪ್ರತೀಕಾರ ಎನ್ನುವಂತೆ ಇರಾನ್ ಕೂಡ ಇಸ್ರೇಲ್ ಮೇಲೆ ಏಕಕಾಲಕ್ಕೆ ೪೦೦ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ರೊಚ್ಚಿಗೆದ್ದಿರುವ ಇಸ್ರೇಲ್ ಹಿಜ್ಬುಲ್ಲಾ ಪ್ರಮುಖ ಕಮಾಂಡರ್, ಮುಂಚೂಣಿ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದೆ.
ಇಸ್ರೇಲ್ ಪಡೆಗಳು ಮತ್ತು ಇರಾನ್ ಬೆಂಬಲಿತ ಗುಂಪಿನ ನಡುವಿನ ಇತ್ತೀಚಿನ ದಿನಗಳಲ್ಲಿ ಪ್ರತೀಕಾರದ ವಿನಿಮಯದ ನಂತರ ಮಧ್ಯಪ್ರಾಚ್ಯದಲ್ಲಿ ಸಂಪೂರ್ಣ ಯುದ್ಧದ ಭೀತಿಯ ನಡುವೆ ಲೆಬನಾನಿನ ರಾಜಧಾನಿ ಬೈರುತ್‌ನಲ್ಲಿರುವ ಹಿಜ್ಬುಲ್ಲಾದ ಗುಪ್ತಚರ ಪ್ರಧಾನ ಕಚೇರಿಯನ್ನು ಧ್ವಂಸ ಮಾಡಿರುವುದಾಗಿ ಇಸ್ರೇಲ್ ಹೇಳಿದೆ.