ಹಿಂದುಳಿದ ವರ್ಗದ ಗುತ್ತಿಗೆದಾರರಿಗೆ ಮೀಸಲಾತಿ ಸೌಲಭ್ಯ- ಸಿ.ಎಂ.ಗೆ ಅಭಿನಂದನೆ
ಕೋಲಾರ,ಸೆ.೩– ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಎಲ್ಲಾ ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲಾತಿಯನ್ನ ಕಲ್ಪಿಸಿರುವ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುವುದಾಗಿ ಬಂಗಾರಪೇಟೆ ಪುರಸಭೆ ಉಪಾಧ್ಯಕ್ಷ ಕುಂಬಾರಪಾಳ್ಯ ಮಂಜುನಾಥ್ ತಿಳಿಸಿದರು.
ನಗರದ ಕನಕ ಮಂದಿರದಲ್ಲಿ ಹಿಂದುಳಿದ ವರ್ಗಗಳ ಗುತ್ತಿಗೆದಾರರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಜ್ಯದ ಹಿಂದುಳಿದ ವರ್ಗಗಳ ಗುತ್ತಿಗೆದಾರರು ಕಾಮಗಾರಿಗಳನ್ನು ಪಡೆದುಕೊಳ್ಳಲು ತುಂಬಾ ಕಷ್ಟಗಳನ್ನು ಎದುರಿಸುತ್ತಿದ್ದರು. ಇದನ್ನು ಮನಗಂಡ ಸರ್ಕಾರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿ ಹಿಂದುಳಿದ ವರ್ಗಗಳ ಹಿತವನ್ನು ಕಾಯುವ ಕೆಲಸವನ್ನು ಮಾಡಿದ್ದಾರೆ ಎಂದರು.
ನೂತನ ಕಾಯ್ದೆಯಿಂದಾಗಿ ಹಿಂದುಳಿದ ವರ್ಗಗಳ ಗುತ್ತಿಗೆದಾರರು ಕಾಮಗಾರಿಗಳನ್ನು ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ತುಂಬಾ ಅನುಕೂಲವಾಗಿದೆ. ಈ ರೀತಿಯ ಒಂದು ಮಹತ್ತರ ಕಾಯ್ದೆ ಬರಲು ಶ್ರಮಿಸಿದ ಎಲ್ಲಾ ಅಧಿಕಾರಿಗಳಿಗೆ ಮತ್ತು ಸಂಘ ಸಂಸ್ಥೆಗಳ ಮುಖಂಡರುಗಳಿಗೆ ಕೋಲಾರ ಜಿಲ್ಲಾ ಹಿಂದುಳಿದ ವರ್ಗಗಳ ಗುತ್ತಿಗೆದಾರರ ಸಂಘದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಜಯರಾಮ್, ಪ್ರಧಾನ ಕಾರ್ಯದರ್ಶಿ ಸಂತೋಷ್ ವಿ.ಎಲ್, ಉಪಾಧ್ಯಕ್ಷ ಗೋಪಾಲಕೃಷ್ಣ, ಖಜಾಂಚಿ ಶ್ರೀಕಾಂತ್, ಮುಖಂಡರುಗಳಾದ ಕೆಂಬೋಡಿ ಶ್ರೀನಿವಾಸ್, ಸಾಗರ್, ತರುಣ್, ನರೇಶ್, ರವಿ, ಮಂಜುನಾಥರಾಜು, ರಘು ಮೊದಲಾದವರಿದ್ದರು.