ಭಾರೀ ಮಳೆ: ಹಲವೆಡೆ ಮನೆ ಕುಸಿತ, ಜನಜೀವನ ಅಸ್ತವ್ಯಸ್ತ
ಕಲಬುರಗಿ,ಸೆ.2-ಅಸ್ನಾ ಚಂಡಮಾರುತದಿಂದ ಕಲಬುರಗಿ, ಯಾದಗಿರಿ, ಬೀದರ್, ವಿಜಯಪುರ ಜಿಲ್ಲೆಗಳಲ್ಲಿ ಭಾನುವಾರ ಭಾರೀ ಮಳೆಯಾಗಿದ್ದು, ಹಲವೆಡೆ ಮನೆ ಕುಸಿದಿವೆ. ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ಕೆಲವು ಕಡೆ ಸಂಪರ್ಕ ಕಡಿತವಾಗಿದೆ. ಇಂದು ಕೆಲವು ಕಡೆ ಮಳೆ ಮುಂದುವರೆದಿದೆ.
ಭಾನುವಾರ ಕಲಬುರಗಿ ನಗರವು ಸೇರಿದಂತೆ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಸೇಡಂ 9, ಕಲಬುರಗಿ 8, ಕಮಲಾಪುರ 8, ಚಿತ್ತಾಪುರ 7, ಚಿಂಚೋಳಿ, ಜೇವರ್ಗಿ 6, ನೆಲೋಗಿ 5, ಖಜೂರಿ 3, ಯಡ್ರಾಮಿಯಲ್ಲಿ 2 ಸೆಂಟಿ ಮೀಟರ್ ಮಳೆಯಾಗಿದೆ. ಶಹಾಬಾದ ಚಿತ್ತಾಪುರ ಮಾರ್ಗದಲ್ಲಿ ಬರುವ ಕಾಗಿಣಾ ನದಿ ತುಂಬಿ ಅಪಾರ ಪ್ರಮಾಣದ ನೀರು ಹೊಲಗದ್ದೆಗಳಿಗೆ ನುಸುಳಿದ್ದರಿಂದ ಹೊಲಗದ್ದೆಗಳು ಜಲಾವೃತವಾಗಿವೆ.
ಭಾನುವಾರ ಸುರಿದ ಭಾರೀ ಮಳೆಗೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಎಲೆನಾವದಗಿ ಗ್ರಾಮದಲ್ಲಿ 4 ಮನೆ, ಕೊಡಹಂಗರಗಾ ಗ್ರಾಮದಲ್ಲಿ 3 ಮನೆ, ಕಣಮಸ್ ಗ್ರಾಮದಲ್ಲಿ 2 ಮನೆ, ಚಿತಲಿ ಗ್ರಾಮದಲ್ಲಿ 1 ಮನೆ ಭಾಗಶ: ಕುಸಿದು ಹಾನಿಯಾಗಿದ್ದು, ನರೋಣಾ ಹೋಬಳಿಯ ಕೆರಿ ಅಂಬಲಗಾ ಗ್ರಾಮದಲ್ಲಿ 2 ಮನೆಗಳು ಭಾಗಶ: ಬಿದ್ದಿವೆ. ಚಿಂಚನಸೂರ ಗ್ರಾಮದಲ್ಲೂ ಸಹ ಮನೆಗಳು ಭಾಗಶ: ಹಾನಿಯಾಗಿವೆ. ಮಳೆಯಿಂದಾಗಿ ಕೆರೆ ಹಳ್ಳಗಳಲ್ಲಿ ನೀರು ಉಕ್ಕಿ ಹರಿಯತೊಡಗಿದ್ದು, ಯಾವುದೇ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ. ಮಳೆಯಿಂದಾಗಿ ತೊಗರಿ, ಉದ್ದು, ಹೆಸರು ಬೆಳೆಗಳಿಗೆ ಹಾನಿಯುಂಟಾಗಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ. ಮಳೆ ನೀರಿನ ಪ್ರವಾಹದಿಂದಾಗಿ ಸಾಲೇಗಾಂವ ಗ್ರಾಮದಲ್ಲಿನ ಕೆರೆಯ ನೀರಿನ ಪ್ರವಾಹ ಹಿನ್ನೆಲೆಯಲ್ಲಿ ದಿನವಿಡೀ ಗ್ರಾಮ ಸಂಪರ್ಕ ಕಡಿತಗೊಂಡಿತ್ತು.
ಜಿಲ್ಲೆಯಾದ್ಯಂತ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇಂದು (ಸೆ.2) ಮಕ್ಕಳ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಡಿಡಿಪಿಐ ಒಂದು ದಿನದ ರಜೆ ಘೋಷಿಸಿದ್ದಾರೆ. ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರೆಂಜ್ ಹಾಗೂ ಯಲ್ಲೋ ಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.
ಬೀದರ್ ಜಿಲ್ಲೆಯಲ್ಲಿ 38 ಮನೆಗಳಿಗೆ ಹಾನಿ
ಬೀದರ್ ಜಿಲ್ಲೆಯಾದ್ಯಂತ ಶನಿವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ವರ್ಷಧಾರೆಗೆ ಭಾನುವಾರ ಜಿಲ್ಲೆಯಲ್ಲಿ 38 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬೀದರ್‍ನ ಜಿಲ್ಲಾ ರಂಗಮಂದಿರ, ಡಿಡಿಪಿಐ ಕಚೇರಿ, ನೆಹರೂ ಕ್ರೀಡಾಂಗಣ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಜಲಾವೃತವಾಗಿದೆ. ಸತತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಔರಾದ್; 6, ಕಮಲನಗರ; 14, ಬಸವಕಲ್ಯಾಣ; 4, ಹುಮನಾಬಾದ್; 2, ಚಿಟಗುಪ್ಪ; 7, ಹುಲಸೂರ;1ಹಾಗೂ ಭಾಲ್ಕಿ; 4 ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬೀದರ್ ಜಿಲ್ಲೆಯಲ್ಲಿ ಭಾನುವಾರ ಭಾರೀ ಮಳೆಯಾಗಿದ್ದು, ಇನ್ನೂ ಕೆಲವು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದೆ. ಭಾನುವಾರ ಜಿಲ್ಲೆಯ 6, ಚಿಟಗುಪ್ಪ, ಔರಾದ್ 5, ಮಂಠಾಳ 4, ಭಾಲ್ಕಿ, ಹುಮನಾಬಾದನಲ್ಲಿ 3 ಸೆಂಮೀ ಮಳೆಯಾಗಿದೆ.
ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯ ಜನರ ಎಚ್ಚರದಿಂದ ಇರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಬೀದರ್ ಸಂಸದ ಸಾಗರ್ ಖಂಡ್ರೆ ಸಾಮಾಜಿಕ ಜಾಲತಾಣದಲ್ಲಿ ಪೆÇೀಸ್ಟ್ ಹಾಕಿದ್ದು, ‘ಅಸ್ನಾ ಚಂಡಮಾರುತದಿಂದ ಬೀದರ್ ಜಿಲ್ಲೆಯಲ್ಲಿ ಭಾರೀ ಮಳೆಯು ಮುಂದುವರೆದಿರುವುದರಿಂದ, ಬೀದರ್ ಲೋಕಸಭಾ ಕ್ಷೇತ್ರದ ಎಲ್ಲಾ ರೈತರು ಹಾಗೂ ಸಾರ್ವಜನಿಕರು ಸುರಕ್ಷಿತವಾಗಿರಬೇಕು ಮತ್ತು ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.
ಮುಂದುವರೆದ ಜಿಟಿಜಿಟಿ ಮಳೆ
ವಿಜಯಪುರ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಜಿಟಿಜಿಟಿ ಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ನಿನ್ನೆ ಬೆಳಗ್ಗೆಯಿಂದ ಆರಂಭವಾಗಿದ್ದ ಜಿಟಿಜಿಟಿ ಮಳೆ ಕಳೆದ ರಾತ್ರಿಯಿಡೀ ಜಿಟಿಜಿಟಿ ಮಳೆ ಇತ್ತು. ಇಂದು ಬೆಳಗ್ಗೆಯೂ ಜಿಟಿಜಿಟಿ ಮಳೆ ಮುಂದುವರೆದಿದೆ. ಜನ ಸಂಚಾರ ವಿರಳವಾಗಿ ಕಂಡು ಬಂತು. ನಗರದ ಬೀದಿ ಬದಿ ವ್ಯಾಪಾರಿಗಳು ಜಿಟಿಜಿಟಿ ಮಳೆಗೆ ನಿರೀಕ್ಷಿತ ವ್ಯಾಪಾರ ವಹಿವಾಟು ಇಲ್ಲದೆ ಗೋಳಾಡುವಂತಾಗಿದೆ. ಮೋಡ ಕವಿದ ವಾತಾವರಣ ಇದ್ದು, ಇನ್ನೂ ಜಿಟಿಜಿಟಿ ಮಳೆ ಮುಂದುವರೆದಿದೆ. ಯಾವುದೇ ಆಸ್ತಿಪಾಸ್ತಿ, ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.