ಒಳಮೀಸಲಾತಿ ಒತ್ತಾಯಿಸಿ ಸೆ. ೯ ಪ್ರತಿಭಟನೆ
ಬೆಂಗಳೂರು, ಸೆ. ೨- ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ಪರಿಶಿಷ್ಟರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಶೀಘ್ರವೇ ಜಾರಿ ಮಾಡುವಂತೆ ಒತ್ತಾಯಿಸಿ ಸೆ. ೯ ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮಾಡಿ ನಂತರ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಆರ್‌ಪಿಐ(ಬಿ) ರಾಷ್ಟ್ರೀಯ ಅಧ್ಯಕ್ಷರು ಹಾಗೂ ದಸಂಸ ರಾಜ್ಯಾಧ್ಯಕ್ಷ ಎನ್. ಮೂರ್ತಿ ಅವರು ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟರ ಮೀಸಲಾತಿ ಪರಿಶಿಷ್ಟ ಜನಾಂಗದ ೧೦೧ ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ ಎಂಬ ಆತಂಕ ಹಾಗೂ ಅಸಹನೆಯಿಂದ ೩೦ ದಶಕಗಳಿಂದ ರಾಜ್ಯಾದ್ಯಾಂತ ನಿರಂತರವಾಗಿ ಹೋರಾಟಗಳು ನಡೆಯುತ್ತಿದೆ. ಹೋರಾಟದಲ್ಲಿ ಹಲವಾರು ಹೋರಾಟಗಾರರು ಜೀವ, ಜೀವನ ಹಾಗೂ ಬದುಕನ್ನೇ ಕಳೆದುಕೊಂಡಿದ್ದಾರೆ.
ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಮಾಡಲು ಕರ್ನಾಟಕ, ಆಂದ್ರ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದ ಹೋರಾಟಗಳ ಹಿನ್ನಲೆಯಲ್ಲಿ ಹತ್ತಾರು ರಾಜ್ಯ ಸರ್ಕಾರಗಳು ರಚಿಸಿದ ಹಲವಾರು ಆಯೋಗಗಳು ನೀಡಿದ ವರದಿಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟಿನ ೭ ನ್ಯಾಯಾದೀಶರ ಸಂವಿಧಾನ ಪೀಠ ದಿನಾಂಕ: ೧-೦೮-೨೦೨೪ ರಂದು ಐತಿಹಾಸಿಕ ತೀರ್ಪು ನೀಡಿ ಈ ವಿವಾದಕ್ಕೆ ತೆರೆ ಎಳೆದಿದೆ.
ಸುಪ್ರೀಂಕೋರ್ಟ್ ಪರಿಶಿಷ್ಟರ ಮೀಸಲಾತಿ ವರ್ಗೀಕರಣ ರಾಜ್ಯಕ್ಕೆ ಸಂವಿಧಾನ ದತ್ತ ಅಧಿಕಾರವಿದೆ ಎಂದು ತೀರ್ಪಿನಲ್ಲಿ ತಿಳಿಸಿದೆ. ಅಲ್ಲದೆ ಈ ಹಿಂದೆ ಕರ್ನಾಟಕ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಬಸವರಾಜ ಬೊಮ್ಮಾಯಿ ರವರ ನೇತೃತ್ವದಲ್ಲಿ “ಸಚಿವ ಸಂಪುಟ ಸಭೆ” ತೀರ್ಮಾನಿಸಿದಂತೆ ಪರಿಶಿಷ್ಟರೆ ಮೀಸಲಾತಿ ವರ್ಗೀಕರಣ ಮಾಡಲು ದಿ: ೩೧-೦೩-೨೦೨೩ ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ತಿಳಿಸಿದರು.
ಇತ್ತೀಚೆಗೆ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದಲ್ಲಿಯೂ ಸಹ “ಸಚಿವ ಸಂಪುಟ”ದ ಸಭೆಯ ತೀರ್ಮಾನದಂತೆ ದಿನಾಂಕ: ೧೭-೦೧-೨೦೨೪ ರಂದು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮೀಸಲಾತಿಯ ವರ್ಗೀಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಇದೀಗ ಸುಪ್ರೀಂ ಕೋರ್ಟ್‌ನ ೭ ನ್ಯಾಯಾಧೀಶರ ಪೀಠವು ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಸಂವಿಧಾನದತ್ತ ಅಧಿಕಾರವಿದೆ ಎಂದು ತೀರ್ಪು ನೀಡಿದೆ. ಆದರೆ ತೀರ್ಪು ಬಂದು ೧೯ ದಿನ ಕಳೆದರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ದಿವ್ಯ ನಿರ್ಲಕ್ಷ್ಯ ತಾಳಿ ಅನುಷ್ಠಾನಗೊಳಿಸಲು ಮೀನಾ ಮೇಷ ಮಾಡುತ್ತಿದೆ ಎಂದು ಆರೋಪಿಸಿದರು.