ಶಾಸಕ ಅಮಾನುತುಲ್ಲಾಖಾನ್ ಬಂಧನ : ಎಎಪಿ ಖಂಡನೆ
ನವದೆಹಲಿ, ಸೆ. ೨- ಇಂದು ಬೆಳಿಗ್ಗೆ ದೆಹಲಿಯ ವಕ್ಫ್ ಮಂಡಳಿಯಲ್ಲಿನ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಅಮಾನುತುಲ್ಲಾ ಖಾನ್ ಅವರ ನಿವಾಸದಲ್ಲಿ ಜಾರಿನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ ನಂತರ ಅಮಾನುತುಲ್ಲಾಖಾನ್ ಬಂಧಿಸಲಾಗಿದೆ.
ಅಮಾನುತುಲ್ಲಾಖಾನ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವ ಕ್ರಮವನ್ನು ಖಂಡಿಸಿರುವ ಎಎಪಿ ಜಾರಿ ನಿರ್ದೇಶನಾಲಯ ಕೇಂದ್ರ ಬಿಜೆಪಿಯ ಅಸ್ತ್ರವಾಗಿದೆ, ಬಿಜೆಪಿ ಬೆಂಬಲದಿಂದ ತನಿಖಾ ಸಂಸ್ಥೆಗಳು ಗೂಂಡಾವರ್ತನೆ ಪ್ರದರ್ಶಿಸುತ್ತಿವೆ. ಬಿಜೆಪಿ ನಿರ್ದೇಶನ ಮೇರೆಗೆ ಈ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದೆ.
ಎಎಪಿಯ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರು ದಾಳಿಯನ್ನು ಖಂಡಿಸಿದ್ದು, ಬಿಜೆಪಿ ವಿರುದ್ಧ ಎತ್ತುವ ಧ್ವನಿಯನ್ನು ಇಡಿ ಮೂಲಕ ಹತ್ತಿಕ್ಕಲಾಗುತ್ತಿದೆ. ಅಂತವರನ್ನು ಬಂಧಿಸಿ ಕಂಬಿ ಹಿಂದೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಉಳಿದಂತೆ ಎಎಪಿ ಸಂಜಯ್ ಸಿಂಗ್ ಸಹ ಇಂದಿನ ಇಡಿ ದಾಳಿಯನ್ನು ಖಂಡಿಸಿದ್ದು ಅಮಾನುತುಲ್ಲಾ ಖಾನ್ ಅವರ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ. ಆದರೆ ಮೋದಿ ಸರ್ವಾಧಿಕಾರಿ ಮತ್ತು ಗೂಂಡಾಗಿರಿ ಇಂದಿಗೂ ಮುಂದುವರಿದಿದೆ ಎಂದು ಹೇಳಿದ್ದಾರೆ.