ಪ್ಯಾರಾಲಿಂಪಿಕ್ಸ್: ಚಿನ್ನಕ್ಕಾಗಿ ತುಳಸಿಮತಿ ಸೆಣಸು
ಪ್ಯಾರಿಸ್, ಸೆ.೨– ಭಾರತದ ಪ್ಯಾರಾ ಶಟ್ಲರ್ ತುಳಸಿಮತಿ ಮುಗಸೇನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ೮ನೇ ಪದಕವನ್ನು ಖಚಿತಪಡಿಸಿದ್ದಾರೆ. ತುಳಸಿಮತಿ ಮುಗಸೇನ್ ಚಿನ್ನದ ಪದಕಕ್ಕಾಗಿ ಹೋರಾಡಲಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನ ಎಸ್‌ಯು೫ ಸೆಮಿಫೈನಲ್‌ನಲ್ಲಿ ತುಳಸಿಮತಿ ಮುಗಸೇನ್ ಸಹ ಆಟಗಾರ್ತಿ ಮನೀಶಾ ರಾಮ್‌ದಾಸ್ ವಿರುದ್ಧ ೪೦ ನಿಮಿಷ ಹೋರಾಡಿ ೨೩-೨೧, ೨೧-೧೭ ಅಂಕಗಳಿಂದ ಗೆದ್ದರು.
ಮೊದಲ ಸೆಟ್‌ನಲ್ಲಿ ಮನೀಶಾ ಅವಕಾಶಗಳನ್ನು ಸೃಷ್ಟಿಸಿಕೊಂಡರೂ ಅವಕಾಶವನ್ನು ಬಳಸಿಕೊಳ್ಳದೇ ಸೋತರು. ಎರಡನೆ ಸೆಟ್‌ನಲ್ಲಿ ಮನೀಶಾ ಮುನ್ನಡೆ ಪಡೆದು ನಂತರ ೧೭-೨೧ ಅಂಕಗಳಿಂದ ಮಣಿದರು. ಸೆಮಿಫೈನಲ್‌ನಲ್ಲಿ ಸೋತಿರುವ ಮನೀಶಾ ರಾಮ್‌ದಾಸ್ ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ.
ತುಳಸಿಮತಿ ಮುಗಸೇನ್ ಚಿನ್ನಕ್ಕಾಗಿ ಚೀನಾದ ಯಾಂಗ್ ಕ್ವಿ ಕ್ಸಿಯಾ ವಿರುದ್ಧ ಸೆಣಸಲಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಈವರೆಗೂ ಒಟ್ಟು ೭ ಪದಕ ಗಳನ್ನು ಗೆದ್ದಿದೆ.