ರಾಜ್ಯಾದ್ಯಂತ ಸಾಕ್ಷರ ಸನ್ಮಾನ ಕಾರ್ಯಕ್ರಮ:5,234 ಮಹಿಳಾ ಪಂಚಾಯತಿ ಸದಸ್ಯರನ್ನು ಸಾಕ್ಷರರನ್ನಾಗಿಸುವ ಸಂಕಲ್ಪ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ:ಆ.31:ಗ್ರಾಮ ಪಂಚಾಯಿತಿ ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳನ್ನು ಅಕ್ಷರಸ್ಥನ್ನಾಗಿಸುವ ʼಸಾಕ್ಷರ ಸನ್ಮಾನʼ ಕಾರ್ಯಕ್ರಮ ಸೆಪ್ಟೆಂಬರ್‌ 1ರಿಂದ ರಾಜ್ಯಾದ್ಯಂತ ಆರಂಭವಾಗಲಿದ್ದು 6,346 ಮಂದಿ ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳು ಅಕ್ಷರ ಕಲಿಯುವ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 94,775 ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿದ್ದು, ಇವರಲ್ಲಿ ಸುಮಾರು ಶೇ.10 ರಷ್ಟು ಅನಕ್ಷರಸ್ಥರಿದ್ದಾರೆ ಎಂದು ಹೇಳಿರುವ ಸಚಿವರು ರಾಜ್ಯದಲ್ಲಿ 9,357 ಅನಕ್ಷರಸ್ಥ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿದ್ದು, ಇವರಲ್ಲಿ 7,277 ಮಂದಿ ಮಹಿಳೆಯರಾಗಿದ್ದಾರೆ, ಕಳೆದ ವರ್ಷದ 2,403 ಮಹಿಳೆಯರು ಸೇರಿದಂತೆ 3,011 ಮಂದಿಯನ್ನು ಸಾಕ್ಷರರನ್ನಾಗಿಸುವ ಕಾರ್ಯಕ್ರಮ ಆರಂಭವಾಗಿದೆ, ಸೋಮವಾರದಿಂದ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ 5,234 ಮಂದಿ ಮಹಿಳಾ ಅನಕ್ಷರಸ್ಥರು ಹಾಗೂ 1,112 ಪುರುಷ ಅಕ್ಷರ ಬಾರದವರು ಅಕ್ಷರ ಕಲಿಯಲಿದ್ದಾರೆ ಎಂದು ತಿಳಿಸಿದ್ದಾರೆ.
ಅನಕ್ಷರಸ್ಥ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಲ್ಲಿ ಓದು, ಬರಹ ಕಲಿಸಿ, ಲೆಕ್ಕಾಚಾರದಲ್ಲಿ ಸ್ವಾವಲಂಬಿಗಳಾಗುವಂತೆ ಮಾಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದು ಗ್ರಾಮ ಪಂಚಾಯಿತಿ ಸಭಾ ನೋಟೀಸ್, ನಡಾವಳಿ, ಮಾರ್ಗಸೂಚಿಗಳನ್ನು ಸ್ವತಃ ಓದಿ ಅರ್ಥಮಾಡಿಕೊಳ್ಳುವಂತೆ ಸಜ್ಜುಗೊಳಿಸುವುದು, ಸ್ಥಳೀಯ ಆಡಳಿತದ ನೀತಿ ನಿರೂಪಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡುವುದು ಹಾಗೂ ಗ್ರಾಮ ಪಂಚಾಯಿತಿ ಸಭೆಗಳು, ಗ್ರಾಮಸಭೆ/ವಾರ್ಡ್‌ಸಭೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಆಶಯವಾಗಿರುತ್ತದೆ ಎಂದು ಹೇಳಿದ್ದಾರೆ.
2024ರ ಸೆಪ್ಟೆಂಬರ್‌ 1ರಿಂದ ಅಕ್ಟೋಬರ್‌ 20 ರವರೆಗೆ ರಾಜ್ಯದ 21 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ, ಪ್ರತಿದಿನ ಎರಡು ಗಂಟೆಗಳಂತೆ 50 ದಿನಗಳಲ್ಲಿ 100 ಗಂಟೆಗಳ ಕಲಿಕೆಯನ್ನು ಪೂರ್ಣಗೊಳಿಸಲಾಗುವುದು, ಕಲಿಯುವವರಿಗೆ ಲೇಖನ ಸಾಮಗ್ರಿ ಹಾಗೂ ಓದುವ ಪುಸ್ತಕಗಳನ್ನು ಒಳಗೊಂಡ ಕಿಟ್ ನೀಡಲಾಗುತ್ತದೆ ಹಾಗೂ ಬೋಧಕರಿಗೆ ಗೌರವಧನ ಹಾಗೂ ಶಿಕ್ಷಣಾರ್ಥಿಗಳಿಗೆ ಗೌರವಧನದೊಂದಿಗೆ ಪ್ರಮಾಣಪತ್ರ ನೀಡಲಾಗುವುದು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.