ಅಪ್ರಾಪ್ತ ಚಲಾಯಿಸುತ್ತಿದ್ದ ವಾಹನ ಡಿಕ್ಕಿ:ಯುವಕ ಸಾವು
ಮುಂಬೈ,ಆ.೩೦-ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿ ಹಾಲು ಮಾರಾಟ ಮಾಡಲು ಹೊರಟಿದ್ದ ೨೪ ವರ್ಷದ ಯುವಕನ ದ್ವಿಚಕ್ರ ವಾಹನಕ್ಕೆ ವೇಗವಾಗಿ ಬಂದ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಎಸ್‌ಯುವಿ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತಪಟ್ಟ ದುರ್ದೈವಿಯನ್ನು ನವೀನ್ ವೈಷ್ಣವ್ ಎಂದು ಗುರುತಿಸಲಾಗಿದೆ.ಡಿಕ್ಕಿ ಹೊಡೆದ ನಂತರ ಎಸ್‌ಯುವಿ ಚಾಲಕ ಓಡಿಹೋಗಲು ಯತ್ನಿಸಿದ್ದಾನೆ, ಆದರೆ ಆಗ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ, ನಂತರ ಪೊಲೀಸರು ೧೭ ವರ್ಷದ ಕಾರು ಚಾಲಕನನ್ನು ಬಂಧಿಸಿ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೊಲೀಸ್ ಅಧಿಕಾರಿಯ ಪ್ರಕಾರ, ಆರೇ ಕಾಲೋನಿಯಲ್ಲಿ ಮುಂಜಾನೆ ೪ ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಾಂಗ್ ಸೈಡ್ ನಿಂದ ಬಂದ ಮಹೀಂದ್ರ ಸ್ಕಾರ್ಪಿಯೋ ನವೀನ್ ವೈಷ್ಣವ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.
ಚಾಲಕನಿಗೆ ೧೭ ವರ್ಷ ವಯಸ್ಸಾಗಿರುವುದರಿಂದ, ಎಸ್‌ಯುವಿ ಮಾಲೀಕ ಇಕ್ಬಾಲ್ ಜಿವಾನಿ (೪೮) ಮತ್ತು ಅವರ ಮಗ ಮೊಹಮ್ಮದ್ ಫಾಜ್ ಇಕ್ಬಾಲ್ ಜಿವಾನಿ (೨೧) ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸ್ ಮೂಲಗಳು ಹೇಳಿವೆ.
ಆರೋಪಿ ಚಾಲಕನು ಕಾರು ಚಾಲನೆ ಮಾಡುವಾಗ ಮದ್ಯಪಾನ ಮಾಡಿದ್ದನೆ ಎಂಬುದನ್ನು ತಿಳಿಯಲು ಆತನ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.