ಜಮ್ಮು- ಕಾಶ್ಮೀರದಲ್ಲಿ ಭದ್ರತಾ ಪರಿಶೀಲನೆ
ಜಮ್ಮು -ಕಾಶ್ಮೀರ,ಅ.೩೦-ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್‌ನಿಂದ ಮೂರು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ಬೆನ್ನಲ್ಲೇ ರಾಂಬನ್, ಕಿಶ್ತ್ವಾರ್ ಮತ್ತು ದೋಡಾ ವ್ಯಾಪ್ತಿಯ ಉಪ ಪೊಲೀಸ್ ಮಹಾನಿರೀಕ್ಷಕ (ಡಿಐಜಿ) ಶ್ರೀಧರ್ ಪಾಟೀಲ್ ಅವರು ಈ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎನ್ನುವ ಮಾಹಿತಿ ನೀಡಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಈ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದೆ.ಪೊಲೀಸ್ ಇಲಾಖೆಯ ಪ್ರಕಾರ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸಲು ಸಾಕಷ್ಟು ಭದ್ರತಾ ಪಡೆಗಳಿವೆ ಎಂದು ಉಪ ಪೊಲೀಸ್ ಮಹಾನಿರೀಕ್ಷರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ೯೦ ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ ೧೮, ೨೫ ಮತ್ತು ಅಕ್ಟೋಬರ್‌ನಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್‌ನಲ್ಲಿ ಮತ ಎಣಿಕೆ ನಡೆಯಲಿದೆ.ಚುನಾವಣಾ ಆಯೋಗದ ಪ್ರಕಾರ ಕೇಂದ್ರಾಡಳಿತ ಪ್ರದೇಶದಲ್ಲಿ ೮೮.೦೬ ಲಕ್ಷ ಮತದಾರರಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ನ್ಯಾಷನಲ್ ಕಾನ್ಫರೆನ್ಸ್ ೯೦ ಸ್ಥಾನಗಳಲ್ಲಿ ೫೧ ಮತ್ತು ಕಾಂಗ್ರೆಸ್ ೩೨ ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಸೌಹಾರ್ದ ಸ್ಪರ್ಧೆಯಲ್ಲಿ ಎರಡು ಪಕ್ಷಗಳು ಐದು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಮತ್ತು ಸಿಪಿಐ(ಎಂ) ಮತ್ತು ಪ್ಯಾಂಥರ್ಸ್‌ಗೆ ತಲಾ ಒಂದು ಸ್ಥಾನ ನೀಡಲಾಗುವುದು.
ಇದಕ್ಕೂ ಮೊದಲು, ಆಗಸ್ಟ್ ೨೬ ರಂದು, ದೋಡಾ ಜಿಲ್ಲಾ ಚುನಾವಣಾ ಪ್ರಾಧಿಕಾರವು ಬಿಗಿ ಭದ್ರತೆಯಲ್ಲಿ ೨೦೨೪ ರ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕಾಗಿ ದೋಡಾದ ಮೂರು ಪ್ರತ್ಯೇಕ ಸ್ಟ್ರಾಂಗ್ ರೂಮ್‌ಗಳಿಗೆ ೮೦೦ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ಯಶಸ್ವಿಯಾಗಿ ತಲುಪಿಸಿದೆ. ಸೆಪ್ಟೆಂಬರ್‌ನಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ ಬಿಗಿ ಭದ್ರತೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಸ್ಟ್ರಾಂಗ್ ರೂಮ್‌ಗಳಿಗೆ ಇವಿಎಂಗಳನ್ನು ಸುರಕ್ಷಿತವಾಗಿ ಸಾಗಿಸಲಾಗಿದೆ ಎಂದು ದೋಡಾ ಜಿಲ್ಲಾ ಚುನಾವಣಾ ಪ್ರಾಧಿಕಾರ ಖಚಿತಪಡಿಸಿದೆ.
೨೦೨೪ ರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಯುತವಾಗಿ ನಡೆಸಲು ಎಲ್ಲಾ ಇವಿಎಂಗಳನ್ನು ಆಯಾ ಕ್ಷೇತ್ರಗಳಿಗೆ ಕಳುಹಿಸಲಾಗಿದೆ ಎಂದು ದೋಡಾ ಜಿಲ್ಲಾ ಚುನಾವಣಾ ಅಧಿಕಾರಿ ಹರ್ವಿಂದರ್ ಸಿಂಗ್ ಖಚಿತಪಡಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಬದ್ಧತೆಯನ್ನು ಸಿಂಗ್ ಒತ್ತಿ ಹೇಳಿದ್ದಾರೆ.