ತಮಿಳು ಟಿವಿ ಉದ್ಯಮದಲ್ಲಿ ಲೈಂಗಿಕ ಕಿರುಕುಳ
ಚಿನ್ನೈ,ಅ.೩೦-ಹೇಮಾ ಸಮಿತಿ ವರದಿ ಬಿಡುಗಡೆಯಾದ ನಂತರ ಮಲಯಾಳಂ ಚಿತ್ರರಂಗದ ಕರಾಳ ಮುಖ ಬಹಿರಂಗವಾಗಿ ಹೊರಬರಲಾರಂಭಿಸಿದೆ. ಇಲ್ಲಿಯವರೆಗೆ ಅನೇಕ ನಟಿಯರು ಉದ್ಯಮದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯವನ್ನು ಬಹಿರಂಗಪಡಿಸಿದ್ದಾರೆ.
ಇದೀಗ ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಶೋಷಣೆಯ ಆರೋಪಗಳು ವಿವಾದದ ಅಲೆ ಎಬ್ಬಿಸುತ್ತಿರುವಂತೆಯೇ ನೆರೆಯ ತಮಿಳುನಾಡಿನಲ್ಲೂ ಅದೇ ರೀತಿಯಲ್ಲಿ ಪುಂಖಾನುಪುಂಖವಾಗಿ ಆರೋಪಗಳು ಹೊರಬಂದಿವೆ.
ಇದೀಗ ಜನಪ್ರಿಯ ನಟಿ ಮತ್ತು ದೂರದರ್ಶನ ಧಾರಾವಾಹಿಗಳ ನಿರ್ಮಾಪಕಿ ಕುಟ್ಟಿ ಪದ್ಮಿನಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ತಮಿಳು ಟಿವಿ ಉದ್ಯಮದಲ್ಲಿ ಲೈಂಗಿಕ ಕಿರುಕುಳ ಮಿತಿಮೀರಿದೆ. ಕೆಲವು ನಟಿಯರು ಎಗ್ಗಿಲ್ಲದ ಲೈಂಗಿಕ ಸಂಬಂಧಗಳ ಬೇಡಿಕೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ. ನ್ಯಾಯ ಸಿಗದೇ, ವೃತ್ತಿ ಕಳೆದುಕೊಳ್ಳುವ ಭಯದಿಂದ ಹಲವು ಬಾರಿ ನಟಿಯರು ಮೌನವಾಗಿರುವುದು ಸೂಕ್ತ ಎಂದು ಎಲ್ಲಿಯೂ ಈ ಅನ್ಯಾಯ ಕುರಿತು ಬಾಯಿ ಬಿಟ್ಟಿಲ್ಲ ಎಂದಿದ್ದಾರೆ. ಈ ಹಿಂದೆ ಲೈಂಗಿಕ ಕಿರುಕುಳದ ವಿಷಯವನ್ನು ಎತ್ತಿದ್ದ ಗಾಯಕಿ ಚಿನ್ಮಯಿ ಮತ್ತು ನಟಿ ಶ್ರೀರೆಡ್ಡಿ ಮೇಲೆ ಹೇರಿದ ನಿಷೇಧದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ತಾನು ಬಾಲ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾಗ ತನಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.