ಮಮತಾ ವಿರುದ್ಧ ಬಿಜೆಪಿ ವಾಗ್ದಾಳಿ
ಕೋಲ್ಕತ್ತಾ,ಆ.೨೯- ತೃಣಮೂಲ ಕಾಂಗ್ರೆಸ್ ಛತ್ರ ಪರಿಷತ್ ಸಂಸ್ಥಾಪನಾ ದಿನದ ಸಾರ್ವಜನಿಕ ರ್‍ಯಾಲಿಯಲ್ಲಿ ಪ್ರತಿಭಟನಾ ನಿರತ ವೈದ್ಯರು ಮತ್ತು ಈಶಾನ್ಯ ರಾಜ್ಯಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.
ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕೇಂದ್ರದ ರಾಜ್ಯ ಸಚಿವ ಸುಕಾಂತ ಮಜುಂದಾರ್ ಅವರು ಮಮತಾ ಬ್ಯಾನರ್ಜಿ ಅವರ ಹೇಳಿಕೆ ಬೆದರಿಕೆ ಎಂದು ಹೇಳಿದ್ದು ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಅಗತ್ಯ ಕ್ರi ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
“ಪಕ್ಷಪಾತ ಧೋರಣೆಗಳನ್ನು ಮೀರಿ ಸಾಂವಿಧಾನಿಕವಾಗಿ ಹುದ್ದೆ ಅಲಂಕರಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟುಮಾಡುವ ಬೆದರಿಸುವ ಹೇಳಿಕೆ ಖಂಡನಾರ್ಹ ಎಂದು ತಿಳಿಸಿದ್ದಾರೆ.
ಈಶಾನ್ಯ ರಾಜ್ಯ ಉರಿಯಲಿದೆ: ಮಮತಾ
ಕೋಲ್ಕತ್ತಾದ ಸಾರ್ವಜನಿಕ ರ್‍ಯಾಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೋಲ್ಕತ್ತಾದ ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ೩೧ ವರ್ಷದ ಮಹಿಳಾ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳದಲ್ಲಿ ಬೆಂಕಿಯನ್ನು ಉಂಟುಮಾಡಲು ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯನ್ನು ಬಳಸುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ.
ನೀವು ಪಶ್ಚಿಮ ಬಂಗಾಳವನ್ನು ಸುಟ್ಟರೆ, ಅಸ್ಸಾಂ, ಈಶಾನ್ಯ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ದೆಹಲಿ ಸೇರಿದಂತೆ ಇತರ ರಾಜ್ಯಗಳು ಸುಟ್ಟುಹೋಗುತ್ತವೆ ಮತ್ತು ನಿಮ್ಮ ಕುರ್ಚಿಯನ್ನು ಉರುಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
“ಇದು ಬಾಂಗ್ಲಾದೇಶ ಎಂದು ಕೆಲವರು ಭಾವಿಸುತ್ತಾರೆ. ನಾನು ಬಾಂಗ್ಲಾದೇಶವನ್ನು ಪ್ರೀತಿಸುತ್ತೇನೆ; ಅವರು ನಮ್ಮಂತೆಯೇ ಮಾತನಾಡುತ್ತಾರೆ ಮತ್ತು ನಮ್ಮ ಸಂಸ್ಕೃತಿಯನ್ನು ಹಂಚಿಕೊಳ್ಳುತ್ತಾರೆ. ಆದರೆ ನೆನಪಿಡಿ, ಬಾಂಗ್ಲಾದೇಶ ಪ್ರತ್ಯೇಕ ದೇಶ, ಮತ್ತು ಭಾರತ ಪ್ರತ್ಯೇಕ ದೇಶ. ಇಲ್ಲಿ ಬೆಂಕಿ ಹಚ್ಚಲು ಮೋದಿ ಬಾಬು ತಮ್ಮ ಪಕ್ಷವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.