ಪಾವೆಲ್ ವಿರುದ್ಧ ಔಪಚಾರಿಕ ತನಿಖೆ
ಪ್ಯಾರೀಸ್,ಆ.೨೯-ಟೆಲಿಗ್ರಾಮ್ ಮುಖ್ಯಸ್ಥ ಮತ್ತು ಸಂಸ್ಥಾಪಕ ಪಾವೆಲ್ ಡುರೊವ್ ಅವರನ್ನು ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಸಂಘಟಿತ ಅಪರಾಧದ ತನಿಖೆಯ ಭಾಗವಾಗಿ ಫ್ರಾನ್ಸ್‌ನಲ್ಲಿ ಔಪಚಾರಿಕ ತನಿಖೆಗೆ ಒಳಪಡಿಸಲಾಗಿದೆ.
೩೯ ವರ್ಷದ ಪಾವೆಲ್ ಡುರೊವ್ ಅವರನ್ನು ಬಂಧನದಲ್ಲಿರಿಸಲಾಗಿಲ್ಲ, ಆದರೆ ನ್ಯಾಯಾಂಗ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫ್ರೆಂಚ್ ಪ್ರಜೆಯೂ ಆಗಿರುವ ರಷ್ಯಾದ ಸಂಜಾತ ಬಿಲಿಯನೇರ್ ಕೂಡ ವಾರಕ್ಕೆ ಎರಡು ಬಾರಿ ಫ್ರೆಂಚ್ ಪೊಲೀಸ್ ಠಾಣೆಗೆ ಹಾಜರಾಗಬೇಕು ಮತ್ತು ಫ್ರೆಂಚ್ ಪ್ರದೇಶವನ್ನು ತೊರೆಯಲು ಅನುಮತಿ ಪಡೆಯಬೇಕೆಂಬ ಷರತ್ತು ವಿಧಿಸಲಾಗಿದೆ.
ಮೆಸೆಂಜರ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ಅಪರಾಧಗಳಿಗಾಗಿ ವಾರಂಟ್ ಅಡಿಯಲ್ಲಿ ಕಳೆದ ಶನಿವಾರ ಪ್ಯಾರಿಸ್‌ನ ಉತ್ತರದಲ್ಲಿರುವ ಲೆ ಬೌರ್ಗೆಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಪಾವೆಲ್ ಡುರೊವ್ ಅವರನ್ನು ಮೊದಲು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.
ವಿಚಾರಣೆಯ ವೇಳೆ ಪ್ಯಾರಿಸ್ ಪ್ರಾಸಿಕ್ಯೂಟರ್‌ಗಳು ಪಾವೆಲ್ ಡುರೊವ್ ಅವರನ್ನು ಆಪಾದಿತ ಅಪರಾಧಗಳ ಮೇಲೆ ಔಪಚಾರಿಕ ತನಿಖೆಗೆ ಒಳಪಡಿಸಲಾಗಿದೆ ಮಕ್ಕಳ ಲೈಂಗಿಕ ಚಿತ್ರಗಳ ಸಂಘಟಿತ ಅಪರಾಧ ವಿತರಣೆ ಆರೋಪ ಕೇಳಿ ಬಂದಿದೆ ಎಂದಿದ್ದಾರೆ.
ಫ್ರಾನ್ಸ್‌ನಲ್ಲಿ, ಔಪಚಾರಿಕ ತನಿಖೆಗೆ ಒಳಪಟ್ಟಿರುವುದು ಅಪರಾಧವನ್ನು ಸೂಚಿಸುವುದಿಲ್ಲ ಅಥವಾ ಅಗತ್ಯವಾಗಿ ವಿಚಾರಣೆಗೆ ಕಾರಣವಾಗುವುದಿಲ್ಲ. ಆದರೆ ತನಿಖೆಯನ್ನು ಮುಂದುವರಿಸಲು ಸಾಕಷ್ಟು ಪ್ರಕರಣವಿರುವುದನ್ನು ನ್ಯಾಯಾಧೀಶರು ಪರಿಗಣಿಸಲಿದ್ದಾರೆ ಎಂದು ಹೇಳಿದರು.
ಪಾವೆಲ್ ವಕೀಲರಾದ ಡೇವಿಡ್-ಒಲಿವಿಯರ್ ಕಾಮಿನ್ಸ್ಕಿ, ಟೆಲಿಗ್ರಾಮ್ ಯುರೋಪಿನ ಡಿಜಿಟಲ್ ನಿಯಮಗಳಿಗೆ ಪ್ರತಿ ವಿಷಯದಲ್ಲೂ ಬದ್ಧವಾಗಿದೆ ಮತ್ತು ಇತರ ಸಾಮಾಜಿಕ ನೆಟ್‌ವರ್ಕ್‌ಗಳಂತೆಯೇ ಅದೇ ಮಾನದಂಡಗಳಿಗೆ ಮಾಡರೇಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.