ಉಕ್ರೇನ್ ಮೇಲೆ ರಷ್ಯಾ ದಾಳಿ: ೭ ಮಂದಿ ಸಾವು
ಕೈವ್, ಆ.೨೭- ಉಕ್ರೇನ್ ಮೇಲೆ ರಷ್ಯಾ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ ೭ ಮಂದಿ ಸಾವನ್ನಪ್ಪಿದ್ದು ಉಭಯ ದೇಶಗಳ ನಡುವೆ ಮತ್ತೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಉಕ್ರೇನ್‌ನ ಅರ್ಧಕ್ಕಿಂತ ಹೆಚ್ಚು ಪ್ರದೇಶಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ರಷ್ಯಾ ಹಾರಿಸಿದ ಪರಿಣಾಮ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ.
ಇಡೀ ದೇಶವನ್ನು ವೈಮಾನಿಕ ದಾಳಿಯ ಎಚ್ಚರಿಕೆಯ ನಡುವೆಯೇ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಜನರಿಗೆ ಅಗತ್ಯವಿರುವ ಮೂಲ ಸೌಕರ್ಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ.
ಉಕ್ರೇನ್‌ನ ಪರಮಾಣು ಶಕ್ತಿ ಮತ್ತು ಮೂಲ ಸೌಕರ್ಯಗಳನ್ನು ಗುರಿಯಾಗಿರಿಸಿಕೊಂಡು ರಷ್ಯಾ ದಾಳಿ ನಡೆಸಿದೆ. ಕಳೆದ ಎರಡು ವರ್ಷಕ್ಕೂ ಹೆಚ್ಚು ಸಮಯದಿಂದ ನಡೆಯುತ್ತಿರುವ ಯುದ್ದ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಸುರಿಮಳೆಯಿಂದಾಗಿ ಉಕ್ರೇನ್ ದೇಶಾದ್ಯಂತ ರಾತ್ರಿಯಿಂದ ಬೆಳಗಿನವರೆಗೆ ದಾಳಿ ಮುಂದುವರಿದೆ. ಬಹುದಿನಗಳ ನಂತರ ಪೂರ್ವ ನಗರವಾದ ಕ್ರಿವಿ ರಿಹ್‌ನಲ್ಲಿ ರಷ್ಯಾದ ಕ್ಷಿಪಣಿಯಿಂದ ನಾಗರಿಕ ಮೂಲಸೌಕರ್ಯ ಕಟ್ಟಡದ ಮೇಲೆ ದಾಳಿ ನಡೆಸಲಾಗಿದೆ.
ದಾಳಿಯಲ್ಲಿ ಕನಿಷ್ಠ ಒಬ್ಬ ಮಹಿಳೆ ಸಾವನ್ನಪ್ಪಿದ್ದು ಇತರ ಐವರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಮಿಲಿಟರಿ ಆಡಳಿತದ ಮುಖ್ಯಸ್ಥ ಒಲೆಕ್ಸಾಂಡರ್ ವಿಲ್ಕುಲ್ ತಿಳಿಸಿದ್ದಾರೆ.
ಉಕ್ರೇನ್‌ನ ವಾಯುಪಡೆಯ ಕಮಾಂಡರ್ ಮೈಕೋಲಾ ಒಲೆಶ್‌ಚುಕ್ ಪ್ರತಿಕ್ರಿಯೆ ನೀಡಿ ರಷ್ಯಾ ೧೨೭ ಕ್ಷಿಪಣಿಗಳು ಮತ್ತು ೧೦೯ ದಾಳಿ ಡ್ರೋನ್‌ಗಳನ್ನು ರಾತ್ರಿಯಿಡಿ ಉಡಾವಣೆ ಮಾಡಿದೆ. ಅವುಗಳಲ್ಲಿ ೧೦೨ ಕ್ಷಿಪಣಿಗಳು ಮತ್ತು ೯೯ ಡ್ರೋನ್‌ಗಳನ್ನು ಉಕ್ರೇನ್ ಹೊಡೆದುರುಳಿಸಿದೆ ಎಂದು ಹೇಳಿದ್ದಾರೆ.
“ಹೆಚ್ಚಾಗಿ ಇದು ಡ್ರೋನ್ ಆಗಿರಬಹುದು ಮತ್ತು ನಾವು ಹಾಗೆ ಭಾವಿಸುತ್ತೇವೆ, ಏಕೆಂದರೆ ಹಾರಾಟದ ಪಥ ಮತ್ತು ವೇಗವು ಖಂಡಿತವಾಗಿಯೂ ಕ್ಷಿಪಣಿ ಅಲ್ಲ ಎಂದು ಸೂಚಿಸುತ್ತದೆ” ಎಂದು ರಾಯಿಟರ್ಸ್ ಉಲ್ಲೇಖಿಸಿದ ಸೇನಾ ವಕ್ತಾರ ಜಾಸೆಕ್ ಗೊರಿಸ್ಜೆವ್ಸ್ಕಿ ತಿಳಿಸಿದ್ದಾರೆ.
ನ್ಯಾಟೋ ವಕ್ತಾರ ಫರಾಹ್ ದಖ್ಲಲ್ಲಾಹ್ ಉಕ್ರೇನ್ ಮೇಲಿನ ದಾಳಿ ಖಂಡಿಸಿದ್ದಾರೆ ಮತ್ತು ರಷ್ಯಾದಿಂದ ನ್ಯಾಟೋ ವಾಯುಪ್ರದೇಶ ಉಲ್ಲಂಘಿಸುವುದು “ಬೇಜವಾಬ್ದಾರಿ ಮತ್ತು ಅಪಾಯಕಾರಿ” ಎಂದು ಹೇಳಿದ್ದಾರೆ.