ಲೈಂಗಿಕ ಆರೋಪ ತನಿಖೆಗೆ ವಿಶೇಷ ತಂಡ ರಚನೆ
ತಿರುವನಂತಪುರಂ,ಅ.೨೬-ಹೇಮಾ ಸಮಿತಿ ವರದಿ ಬಂದ ನಂತರ ಮಲಯಾಳಂ ಚಿತ್ರರಂಗದ ಕರಾಳ ಸತ್ಯ ಬಯಲಾಗಿದೆ.
ಮಲಯಾಳಂ ಚಿತ್ರೋದ್ಯಮದಲ್ಲಿನ ಲೈಂಗಿಕ ಆರೋಪಗಳ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತಂಡವನ್ನು ರಚಿಸಿದೆ. ಮುಖ್ಯಮಂತ್ರಿ ಕರೆದಿದ್ದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಉನ್ನತ ಮಟ್ಟದ ಸಭೆಯನ್ನು ಕರೆದ ನಂತರ ಸರ್ಕಾರ ಭಾನುವಾರ ಏಳು ಸದಸ್ಯರ ತಂಡವನ್ನು ರಚಿಸಿತು. ವಿಶೇಷ ತಂಡವನ್ನು ಐಜಿ ಸ್ಪರ್ಜನ್ ಕುಮಾರ್ ನೇತೃತ್ವ ವಹಿಸಲಿದ್ದಾರೆ .ರಾಜ್ಯದ ನಾಲ್ವರು ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡಿರುತ್ತಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಂಕಷ್ಟಗಳಿಗೆ ಸಂಬಂಧಿಸಿದ ದೂರುಗಳು ಮತ್ತು ಬಹಿರಂಗಗೊಂಡ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ರಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಶೇಷ ತನಿಖಾ ತಂಡದ ನೇತೃತ್ವವನ್ನು ಅಪರಾಧ ವಿಭಾಗದ ಎಡಿಜಿಪಿ ಎಚ್.ವೆಂಕಟೇಶ್ ವಹಿಸಲಿದ್ದಾರೆ.
ಐಜಿಪಿ ಜಿ ಸ್ಪರ್ಜನ್ ಕುಮಾರ್, ಡಿಐಜಿ ಎಸ್ ಅಜೀತಾ ಬೇಗಂ, ಅಪರಾಧ ವಿಭಾಗದ ಹೆಚ್ಕ್ಯು ಎಸ್ಪಿ ಮೆರಿನ್ ಜೋಸೆಫ್, ಕರಾವಳಿ ಪೊಲೀಸ್ ಎಐಜಿ ಜಿ ಪೂಂಗುಝಾಲಿ, ಕೇರಳ ಪೊಲೀಸ್ ಅಕಾಡೆಮಿ ಸಹಾಯಕ. ನಿರ್ದೇಶಕಿ ಐಶ್ವರ್ಯಾ ಡೊಂಕ್ರೆ, ಕಾನೂನು ಮತ್ತು ಸುವ್ಯವಸ್ಥೆ ಎಐಜಿ ಅಜಿತ್ ವಿ ಮತ್ತು ತಿರುವನಂತಪುರಂ ಅಪರಾಧ ವಿಭಾಗದ ಎಸ್ಪಿ ಮಧುಸೂದನನ್ ತನಿಖಾ ತಂಡದ ಸದಸ್ಯರಾಗಿದ್ದಾರೆ.
ಕೇರಳ ಸರ್ಕಾರವು ರಚಿಸಿರುವ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರಿಗೆ ಕಿರುಕುಳ ಮತ್ತು ಶೋಷಣೆಯ ಪ್ರಕರಣಗಳನ್ನು ಬಹಿರಂಗಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.
ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿರುವ ನಿರ್ದೇಶಕ ರಂಜಿತ್ ಮತ್ತು ತಾರಾ ಸಂಘಟನೆ ಅಮ್ಮ ಪ್ರಧಾನ ಕಾರ್ಯದರ್ಶಿ ಮತ್ತು ನಟ ಸಿದ್ದಿಕ್ ಲೈಂಗಿಕ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ನಂತರ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಬಂಗಾಳಿ ನಟಿಯ ಆರೋಪದ ಹಿನ್ನೆಲೆಯಲ್ಲಿ, ರಂಜಿತ್ ಅಧ್ಯಕ್ಷ ಸ್ಥಾನವನ್ನು ಎಡಪಂಥೀಯ ಬೆಂಬಲಿಗರು ವಿರೋಧಿಸಿದರು. ಇದರ ಬೆನ್ನಲ್ಲೇ ಭಾನುವಾರ ಬೆಳಗ್ಗೆ ರಂಜಿತ್ ರಾಜೀನಾಮೆ ನೀಡಿದ್ದಾರೆ.